ADVERTISEMENT

ಚೀನಾದ ಶಾಂಘೈನಲ್ಲಿ ಹೆಚ್ಚಿದ ಕೋವಿಡ್ ಸಾವಿನ ಪ್ರಕರಣ

ಏಜೆನ್ಸೀಸ್
Published 19 ಏಪ್ರಿಲ್ 2022, 3:00 IST
Last Updated 19 ಏಪ್ರಿಲ್ 2022, 3:00 IST
ಶಾಂಘೈನಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಲು ಸಾಲುಗಟ್ಟಿರುವ ಸ್ಥಳೀಯರು
ಶಾಂಘೈನಲ್ಲಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಲು ಸಾಲುಗಟ್ಟಿರುವ ಸ್ಥಳೀಯರು   

ಶಾಂಘೈ: ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಕೋವಿಡ್ -19 ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸಾವಿರಾರು ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಸಾವಿನ ಸಂಖ್ಯೆಯೂ ಏರತೊಡಗಿದೆ. ಮಂಗಳವಾರ ಕೋವಿಡ್‌ನಿಂದ ಏಳು ಸಾವು ಸಂಭವಿಸಿವೆ.

ಸೋಮವಾರ ಕೋವಿಡ್‌ನಿಂದ ಮೊದಲ ಸಾವು ವರದಿಯಾಗಿತ್ತು. ಇದೀಗ, 48 ಗಂಟೆ ಕಳೆಯುವುದರೊಳಗೆ ಮೃತರ ಒಟ್ಟು ಸಂಖ್ಯೆ 10ಕ್ಕೇರಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಕಠಿಣ ಲಾಕ್‌ಡೌನ್‌ಗಳು, ಸಾಮೂಹಿಕ ಪರೀಕ್ಷೆ ಮತ್ತು ಸುದೀರ್ಘ ಸಂಪರ್ಕತಡೆ ಸೇರಿದಂತೆ ಚೀನಾದಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸುತ್ತಿದ್ದು, ವಿಶ್ವದ ಬೇರೆಡೆ ಕಡೆಗಳಲ್ಲಿ ಸಂಭವಿಸಿದ ರೀತಿ ಸಾವುಗಳ ಏರಿಕ ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳನ್ನು ತಪ್ಪಿಸಿದೆ.

ADVERTISEMENT

ಆದರೆ, ಅಧಿಕ ಪ್ರಮಾಣದ ವೃದ್ಧರ ಜನಸಂಖ್ಯೆ ಇರುವ ಚೀನಾದಲ್ಲಿ ಕಡಿಮೆ ಲಸಿಕೆ ದರ ಹೊಂದಿರುವುದೂ ಸಹ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ದೇಶದ 60 ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ನಿವಾಸಿಗಳು ಎರಡು ಡೋಸ್ ಕೋವಿಡ್ ಲಸಿಕೆಗಳನ್ನು ಸ್ವೀಕರಿಸಿದ್ದಾರೆ ಮತ್ತು ಶೇಕಡಾ 40ಕ್ಕಿಂತ ಕಡಿಮೆ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂದು ಶಾಂಘೈನ ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಹಲವು ವರದಿಯಾಗದ ಸಾವುಗಳ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯತ್ತಿದೆ. ಜನವರಿಯಲ್ಲಿ ಓಮೈಕ್ರಾನ್ ರೂಪಾಂತರವು ಹೆಚ್ಚಾದಾಗಿನಿಂದ ಕೋವಿಡ್ -19ನಿಂದ ಸುಮಾರು 9,000 ಸಾವು ಸಂಭವಿಸಿವೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಮೃತಪಟ್ಟ ಏಳು ಮಂದಿ 60ರಿಂದ 101ರ ನಡುವಿನ ವಯಸ್ಸಿನವರು ಮತ್ತು ಎಲ್ಲರೂ ಹೃದ್ರೋಗ ಹಾಗೂ ಮಧುಮೇಹದಂತಹ ಸಮಸ್ಯೆಗಳಿಂದ ಬಳಲುತ್ತಿದ್ದವರು ಎಂದು ಶಾಂಘೈ ಮುನ್ಸಿಪಲ್ ಹೆಲ್ತ್ ಕಮಿಷನ್ ಹೇಳಿದೆ.

‘ಈ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ತೀವ್ರವಾಗಿ ಅಸ್ವಸ್ಥರಾಗಿದ್ದರು ಮತ್ತು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು. ಸಾವಿನ ನೇರ ಕಾರಣ ಅವರಿಗಿದ್ದ ಕಾಯಿಲೆಗಳು’ಎಂದು ಆಯೋಗ ಹೇಳಿದೆ.

ಅಲ್ಲದೆ, ನಗರದಲ್ಲಿ 20,000ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಬಹುಪಾಲು ಲಕ್ಷಣರಹಿತವಾಗಿವೆ..

ಶಾಂಘೈನ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 25 ಸಾವಿರದ ಆಸುಪಾಸಿನಲ್ಲಿದ್ದು, 2.5 ಕೋಟಿ ನಿವಾಸಿಗಳಲ್ಲಿ ಹೆಚ್ಚಿನವರು ಮಾರ್ಚ್‌ನಿಂದ ತಮ್ಮ ಮನೆಗಳಲ್ಲೇ ಲಾಕ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.