ADVERTISEMENT

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಪತ್ನಿ ಕುಲ್ಸೂಮ್‌ ನಿಧನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2018, 13:11 IST
Last Updated 11 ಸೆಪ್ಟೆಂಬರ್ 2018, 13:11 IST
ಕುಲ್ಸೂಮ್‌ ನವಾಜ್‌
ಕುಲ್ಸೂಮ್‌ ನವಾಜ್‌   

ಲಂಡನ್‌ (ಪಿಟಿಐ):ಈಗ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪತ್ನಿ ಬೇಗಂ ಕುಲ್ಸೂಮ್‌ (68) ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ ಎಂದು ‘ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌’ ಅಧ್ಯಕ್ಷ ಷೆಹಬಾಜ್‌ ಷರೀಫ್‌ ಹೇಳಿದ್ದಾರೆ.

ಕುಲ್ಸೂಮ್‌ ಅವರು 2014ರ ಜೂನ್‌ನಿಂದ ಲಂಡನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಕ್ಷೀಣಿಸಿದ ಕಾರಣ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಸೋಮವಾರ ಶ್ವಾಸಕೋಶದ ಸಮಸ್ಯೆ ಉಲ್ಬಣಿಸಿತ್ತು ಎಂದು ಜಿಯೊ ಟಿವಿ ವರದಿ ಮಾಡಿದೆ. ಕುಲ್ಸೂಮ್‌ ಅವರಿಗೆ ಗಂಟಲು ಕ್ಯಾನ್ಸರ್‌ ಇರುವ ಬಗ್ಗೆ 2017ರ ಆಗಸ್ಟ್‌ನಲ್ಲಿ ಗೊತ್ತಾಗಿತ್ತು.

ಪಾಕ್‌ಗೆ ಮೃತದೇಹ: ಕುಲ್ಸೂಮ್ ಅವರ ಮೃತದೇಹವನ್ನು ಪಾಕಿಸ್ತಾನಕ್ಕೆ ತರಲು ಷರೀಫ್ ಅವರ ಕುಟುಂಬ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದಲ್ಲೇ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ADVERTISEMENT

ಕುಲ್ಸೂಮ್ ನಿಧನಕ್ಕೆ ಸಂತಾಪ ಸೂಚಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅವರ ಕುಟುಂಬಕ್ಕೆ ಅಗತ್ಯ ಸಹಕಾರ ನೀಡುವಂತೆ ಲಂಡನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗೆ ಸೂಚಿಸಿದ್ದಾರೆ.

ಜೀವನ: ಮುಷರಫ್ ಅವರಿಂದ ಪ್ರಧಾನಿ ನವಾಜ್ ಷರೀಫ್ ಉಚ್ಛಾಟನೆಗೊಂಡ ಪರಿಣಾಮ, 1999ರಲ್ಲಿ ಕುಲ್ಸೂಮ್ ಗೃಹಬಂಧನದಲ್ಲಿ ಇರಬೇಕಾಯಿತು. 1999–2002ರ ಅವಧಿಯಲ್ಲಿ ಪಿಎಂಎಲ್‌–ಎನ್ ಪಕ್ಷದ ಚುಕ್ಕಾಣಿಯನ್ನೂ ಹಿಡಿದಿದ್ದರು. ಷರೀಫ್ ಅವರನ್ನು ಸುಪ್ರೀಂಕೋರ್ಟ್ ಪದಚ್ಯುತಗೊಳಿಸಿದ ಬಳಿಕ ನಡೆದ ಉಪಚುನಾವಣೆಯಲ್ಲಿ ಜಯ ಗಳಿಸಿದ್ದರು. ಆದರೆ ಅನಾರೋಗ್ಯದ ಕಾರಣ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲೂ ಆವರಿಗೆ ಆಗಿರಲಿಲ್ಲ.

1950ರಲ್ಲಿ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದ ಅವರು ಖ್ಯಾತ ಕುಸ್ತಿಪಟು ಗಾಮಾ ಪೆಹಲ್‌ವಾನ್ ಅವರ ಮೊಮ್ಮಗಳು. 1971ರಲ್ಲಿ ಷರೀಫ್‌ ಅವರನ್ನು ವಿವಾಹವಾಗಿದ್ದರು. ಮಕ್ಕಳಾದ ಹಸನ್, ಹುಸೇನ್, ಮರಿಯಮ್ ಹಾಗೂ ಆಸ್ಮಾ ಅವರನ್ನು ಕುಲ್ಸೂಮ್ ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.