ADVERTISEMENT

ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ: ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 5 ಮಾರ್ಚ್ 2023, 17:22 IST
Last Updated 5 ಮಾರ್ಚ್ 2023, 17:22 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಲಂಡನ್‌: ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂಸ್ಥಿಕ ಸಂಸ್ಥೆಗಳ ಮೇಲೆ ‘ಭೀಕರ ದಾಳಿ’ ನಡೆಯುತ್ತಿದೆ ಎಂದು ಶನಿವಾರ ಇಲ್ಲಿ ಟೀಕಿಸಿದ್ದಾರೆ.

ಬ್ರಿಟನ್‌ ಪ್ರವಾಸದ ಭಾಗವಾಗಿ ಲಂಡನ್‌ನಲ್ಲಿ ಇರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಬಿಬಿಸಿಯ ಕಚೇರಿಗಳ ಮೇಲೆ ಈಚೆಗೆ ನಡೆದ ಆದಾಯ ತೆರಿಗೆ ಇಲಾಖೆ ನಡೆಸಿದ ‘ಪರಿಶೀಲನೆ’ಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದಕ್ಕೆ ಉದಾಹರಣೆ ಎಂದರು.

’ದೇಶದ ಬಾಯಿ ಮುಚ್ಚಿಸಲು ಯತ್ನಿಸುತ್ತಿರುವ ಆಡಳಿತಾರೂಢ ಬಿಜೆಪಿಯ ವಿರುದ್ಧ ಧ್ವನಿ ಎತ್ತುವಂತೆ ಮಾಡುವುದೇ ‘ಭಾರತ ಜೋಡೊ’ ಯಾತ್ರೆಯ ಉದ್ದೇಶವಾಗಿತ್ತು. ಇದೇ ಕಾರಣಕ್ಕೆ ‘ಭಾರತ ಜೋಡೊ’ ಅತ್ಯವಶ್ಯಕ ಎಂದೆನೆಸಿತು’ ಎಂದು ಹೇಳಿದರು.

ADVERTISEMENT

ದೇಶಕ್ಕೆ ಪರ್ಯಾಯ ಚಿಂತನೆ ಕುರಿತಂತೆ ಒಗ್ಗೂಡುವ ಸಂಬಂಧ ಪ್ರತಿಪಕ್ಷಗಳಲ್ಲಿ ಮಾತುಕತೆ ನಡೆದಿದೆ. ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಆಸ್ತಿಯ ಕೇಂದ್ರೀಕರಣ, ಮಹಿಳೆಯರ ವಿರುದ್ಧದ ದೌರ್ಜನ್ಯ ಕುರಿತಂತೆ ಜನರಲ್ಲಿ ಕೋಪ ಮಡುಗಟ್ಟಿದೆ ಎಂದು ಹೇಳಿದರು.

ಮಾಧ್ಯಮ, ಸಾಂಸ್ಥಿಕ ಸಂಸ್ಥೆಗಳು, ನ್ಯಾಯಾಂಗ, ಸಂಸತ್ತು ಎಲ್ಲದರ ಮೇಲೂ ಈಗ ದಾಳಿ ನಡೆಯುತ್ತಿದೆ. ಟಿ.ವಿ. ವಾಹಿನಿಗಳಲ್ಲಿ ಜನರ ಧ್ವನಿಗಳಿಗೆ ಅವಕಾಶ ಸಿಗುವುದು ಕಷ್ಟವಾಗಿದೆ. ಈಗ ಬಿಬಿಸಿ ಮೇಲೆ ದಾಳಿ ನಡೆಸಿದೆ. ಒಂದು ವೇಳೆ ಬಿಬಿಸಿಯು ಸರ್ಕಾರದ ವಿರುದ್ಧ ಬರೆಯುವುದನ್ನು ನಿಲ್ಲಿಸಿದರೆ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಎಲ್ಲ ಪ್ರಕರಣಗಳು ಕಾಣೆಯಾಗುತ್ತವೆ‘ ಎಂದು ರಾಹುಲ್‌ ಹೇಳಿದರು.

‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎನ್ನುವುದನ್ನು ಗುರುತಿಸಲು ಅಮೆರಿಕ ಮತ್ತು ಯುರೋಪ್‌ ಸೇರಿದಂತೆ ಜಗತ್ತಿನ ಪ್ರಜಾಪ್ರಭುತ್ವದ ರಾಷ್ಟ್ರಗಳು ವಿಫಲವಾಗಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ವಿದೇಶಗಳಲ್ಲಿ ಭಾರತ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಸರ್ಕಾರದ ಟೀಕೆಗೆ ಪ್ರತಿಕ್ರಿಯಿಸಿದ ಅವರು, ದೇಶಕ್ಕೆ ಅವಮಾನ ಆಗುವಂತೆ ನಾನು ಎಂದೂ ನಡೆದುಕೊಂಡಿಲ್ಲ. ಹಾಗೆ ಎಂದೂ ನಡೆದುಕೊಳ್ಳುವುದಿಲ್ಲ. ನನ್ನ ಮಾತುಗಳನ್ನು ಬಿಜೆಪಿಯು ತಿರುಚುತ್ತಿದೆ ಎಂದು ಆರೋಪಿಸಿದರು.

ಮರ್ಯಾದೆ ಕಳೆಯುತ್ತಿರುವ ರಾಹುಲ್‌ ಗಾಂಧಿ: ಪ್ರಲ್ಹಾದ ಜೋಶಿ ಟೀಕೆ
ದಾವಣಗೆರೆ:
‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ದೇಶದ ಮರ್ಯಾದೆ ಕಳೆಯುತ್ತಿದ್ದಾರೆ. ಏನು ಮಾತನಾಡುತ್ತಿದ್ದೇನೆ ಎಂಬ ಅರಿವೂ ಅವರಿಗೆ ಇದ್ದಂತಿಲ್ಲ’ ಎಂದು ಕೇಂದ್ರದ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಭಾನುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಅತಿ ಹೆಚ್ಚು ಟೀಕೆಗಳನ್ನು ಎದುರಿಸಿದರೂ ಮೋದಿ ಅವರು ಎಲ್ಲವನ್ನೂ ಕ್ರೀಡಾಮನೋಭಾವದಿಂದ ಸ್ವೀಕರಿಸುತ್ತಾರೆ. ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ಆಡಳಿತದಲ್ಲಿ ವಿವಿಧ ರಾಜ್ಯಗಳ 92 ಚುನಾಯಿತ ಸರ್ಕಾರಗಳನ್ನು ಕಿತ್ತೆಸೆದು ಅನ್ಯಾಯ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಾರೆ. ಈಗ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.