ಕೈರೊ: ಸುಡಾನ್‌ನ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದೆ. ದಾರ್ಫೂರ್ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭೂಕುಸಿತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮರ‍್ರಾ ಪರ್ವತ ಪ್ರದೇಶದಲ್ಲಿನ ತಾರಾಸಿನ್ ಗ್ರಾಮವು ಸಂಪೂರ್ಣ ನಾಶವಾಗಿದೆ. ಹಳ್ಳಿಯ ಜನರೆಲ್ಲರೂ ಭೂಕುಸಿತದಲ್ಲಿ ಸಿಲುಕಿ ಮೃತಪಟ್ಟಿದ್ದು, ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ಈ ಪ್ರದೇಶದ ಮೇಲೆ ನಿಯಂತ್ರಣ ಹೊಂದಿರುವ ಬಂಡುಕೋರರ ಗುಂಪು ಸುಡಾನ್ ಲಿಬರೇಷನ್ ಮೂವ್‌ಮೆಂಟ್ ಆರ್ಮಿ ತಿಳಿಸಿದೆ.
ಭೂಕುಸಿತದ ಮಣ್ಣಿನಡಿ ಸಿಲುಕಿರುವವರ ರಕ್ಷಣೆಗಾಗಿ ಶೋಧ ನಡೆದಿದೆ. ಮಂಗಳವಾರ ಸಂಜೆ ವೇಳೆಗೆ 100 ಮಂದಿಯ ಶವಗಳು ಸಿಕ್ಕಿವೆ ಎಂದು ಬಂಡುಕೋರರ ಗುಂಪಿನ ವಕ್ತಾರ ಮೊಹಮದ್ ಅಬ್ದುಲ್–ರಹಮಾನ್ ಅಲ್–ನಯರ್ ಹೇಳಿದ್ದಾರೆ.
ಮರ‍್ರಾ ಪರ್ವತ ಶ್ರೇಣಿಯಲ್ಲಿ ತಾರಾಸಿನ್ ಗ್ರಾಮವಿದ್ದು, ದುರಂತದ ಸ್ಥಳಕ್ಕೆ ತೆರಳುವುದು ಕಷ್ಟವಾಗಿದೆ. ರಕ್ಷಣಾ ಕಾರ್ಯಾಚರಣೆಗೂ ಇದರಿಂದ ಅಡ್ಡಿಯಾಗಿದೆ ಎನ್ನಲಾಗಿದೆ.
ಮುನ್ನೂರರಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಭೂಕುಸಿತದ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿರಬಹುದು ಎಂದು ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಮಾನವೀಯ ಸಂಯೋಜಕರಾದ ಲುಕಾ ರೆಂಡಾ ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.