ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರಾಂತ್ಯದ ಖುಜ್ದಾರ್ ಜಿಲ್ಲೆಯಲ್ಲಿ ಶಾಲಾ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 3 ಮಕ್ಕಳು ಸೇರಿದಂತೆ 5 ಜನರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯವಾಗಿರುವ ಘಟನೆಯು ಬುಧವಾರ ಜರುಗಿದೆ ಎಂದು ಪಾಕಿಸ್ತಾನ ಸೇನಾ ವಕ್ತಾರರು ತಿಳಿಸಿದ್ದಾರೆ.
ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, 38 ಜನರಿಗೆ ಗಂಭೀರ ಗಾಯವಾಗಿದೆ. ಇದು ‘ಹೇಡಿತನ’ ಹಾಗೂ ‘ಭಯಾನಕ’ ದಾಳಿಯಾಗಿದೆ ಎಂದರು.
ವಾಹನದ ಮೂಲಕ ಸಾಗಿಸಬಹುದಾದ ಸುಧಾರಿತ ಸ್ಫೋಟಕ ಸಾಧನ(ವಿಬಿಐಇಡಿ)ವನ್ನು ಘಟನೆಯಲ್ಲಿ ಬಳಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಘಟನೆಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಖಂಡಿಸಿದ್ದು, ‘ಅಮಾಯಕ ಮಕ್ಕಳು ಹಾಗೂ ಶಿಕ್ಷಕರ ಮೇಲಿನ ದಾಳಿಯು ನೋವುಂಟು ಮಾಡಿದೆ. ಘಟನೆಗೆ ಕಾರಣವಾದವರನ್ನು ಬಂಧಿಸಿ, ಸಂತ್ರಸ್ತರಿಗೆ ನ್ಯಾಯಕೊಡಿಸುವುದಾಗಿ’ ತಿಳಿಸಿದ್ದಾರೆ.
ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಕೂಡ ದಾಳಿಯ ಹೊಣೆ ಹೊತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.