ADVERTISEMENT

ಟ್ಯಾಬ್ಲೆಟ್‌ ಬೇಡ: ಪುಸ್ತಕ ಓದಿಸಿ, ಬರೆಯಿಸಿ ಶಿಕ್ಷಕರಿಗೆ ಸ್ವೀಡನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 15:46 IST
Last Updated 10 ಸೆಪ್ಟೆಂಬರ್ 2023, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಟಾಕ್‌ಹೋಂ, ಸ್ವೀಡನ್ (ಎ.ಪಿ): ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಪಠ್ಯವನ್ನು ಓದುವ ಮತ್ತು ಕೈಬರಹದ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸ್ವೀಡನ್‌ ಸರ್ಕಾರವು ಶಿಕ್ಷಕರಿಗೆ ಸೂಚಿಸಿದೆ. 

ಆನ್‌ಲೈನ್‌ ಸಂಶೋಧನೆ, ಕೀ ಬೋರ್ಡ್‌ ಕೌಶಲ, ಟ್ಯಾಬ್ಲೆಟ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಬೇಕು‘ ಎಂದು 11 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮೈತ್ರಿ ಸರ್ಕಾರದಲ್ಲಿನ ಶಿಕ್ಷಣ ಸಚಿವ ಲೊಟ್ಟಾ ಎಡ್ಹೋಮ್‌ ಅವರು ಸೂಚಿಸಿದ್ದರು.

‘ಸ್ವೀಡನ್‌ನಲ್ಲಿ ನರ್ಸರಿ ಹಂತದಲ್ಲೇ ಟ್ಯಾಬ್ಲೆಟ್‌ ಪರಿಚಯಿಸಲಾಗಿದೆ. ಇದರಿಂದ ಕಲಿಕೆಗೆ ಸಂಬಂಧಿಸಿ ಮಕ್ಕಳಲ್ಲಿ ಪ್ರಾಥಮಿಕ ಕೌಶಲವು ಕುಗ್ಗಲಿದೆ’ ಎಂದು ರಾಜಕಾರಣಿಗಳು ಹಾಗೂ ಶಿಕ್ಷಣ ಕ್ಷೇತ್ರದ ಹಲವು ಪರಿಣತರು ವಿರೋಧ ವ್ಯಕ್ತಪಡಿಸಿದ್ದರು. ‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಹೆಚ್ಚು ಬೇಕು. ಕಲಿಕೆಗೆ ಭೌತಿಕ ಪಠ್ಯಪುಸ್ತಕಗಳು ಮುಖ್ಯ’ ಎಂದು ಸಚಿವ ಎಡ್ಹೋಮ್‌ ಮಾರ್ಚ್‌ನಲ್ಲಿ ಹೇಳಿದ್ದರು.

ADVERTISEMENT

ಡಿಜಿಟಲ್‌ ಪರಿಕರವನ್ನು ಕಡ್ಡಾಯಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನಿರ್ಧಾರ ಕೈಬಿಡಬೇಕು. ಆರು ವರ್ಷದೊಳಗಿನ ಮಕ್ಕಳಲ್ಲಿ ಡಿಜಿಟಲ್‌ ಪರಿಕರಗಳ ಬಳಕೆಯನ್ನು ಸಂಪೂರ್ಣ ತಪ್ಪಿಸುವುದು ಸರ್ಕಾರದ ಉದ್ದೇಶ ಎಂದು ಸಚಿವರು ಹೇಳಿದ್ದರು.

ಯುನೆಸ್ಕೊ ಕಳೆದ ತಿಂಗಳು ಬಿಡುಗಡೆ ಮಾಡಿದ್ದ ವರದಿಯಲ್ಲೂ, ‘ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಸುವ ತುರ್ತು ಇದೆ. ಶಾಲೆಗಳಿಗೆ ಇಂಟರ್‌ನೆಟ್‌ ಸಂಪರ್ಕವನ್ನು ತ್ವರಿತವಾಗಿ ಒದಗಿಸಲು ರಾಷ್ಟ್ರಗಳು ಆದ್ಯತೆ ನೀಡಬೇಕು. ಅದೇ ಸಂದರ್ಭದಲ್ಲಿ ತಂತ್ರಜ್ಞಾನವು ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನೇ ಬದಲಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ಮಾಡಿತ್ತು.

‘ಸ್ವೀಡನ್‌ನ ಮಕ್ಕಳ ಓದುವ ಸಾಮರ್ಥ್ಯವು ಐರೋಪ್ಯ ರಾಷ್ಟ್ರಗಳಲ್ಲಿನ ಸರಾಸರಿಗಿಂತ ಹೆಚ್ಚಾಗಿಯೇ ಇದೆ. ಆದರೆ, 2016 ಮತ್ತು 2021ರ ಅವಧಿಯಲ್ಲಿ ಕುಸಿದಿದೆ’ ಎಂದು ನಾಲ್ಕನೇ ತರಗತಿಯ ಮಕ್ಕಳ ಸಾಮರ್ಥ್ಯದ ಸಮೀಕ್ಷೆ ನಡೆಸಿದ್ದ ಅಂತರರಾಷ್ಟ್ರೀಯ ಸಂಸ್ಥೆಯೊಂದು ಹೇಳಿತ್ತು. 

ಮಕ್ಕಳಲ್ಲಿನ ಓದುವ ಸಾಮರ್ಥ್ಯಕ್ಕೆ ಸಂಬಂಧಿಸಿದ ಈ ಸಮೀಕ್ಷೆಯ ಪ್ರಕಾರ, ಸ್ವೀಡನ್‌ನಲ್ಲಿ ಮಕ್ಕಳ ಸರಾಸರಿ ಪಾಯಿಂಟ್ 2016ರಲ್ಲಿ 555 ಇದ್ದರೆ, ಅದು 2021ರಲ್ಲಿ 544ಕ್ಕೆ ಕುಸಿದಿದೆ ಎಂದು ಈ ವರದಿಯು ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.