ತೈಪೆ(ಎಎಫ್‌ಪಿ): ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಗೆ ತೈವಾನ್ ಸಂಸತ್ತಿನಲ್ಲಿ ಶುಕ್ರವಾರ ಅಂಗೀಕಾರ ನೀಡಲಾಗಿದೆ.
ಈ ಮೂಲಕ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ತೈವಾನ್ ಪಾತ್ರವಾಗಿದೆ.
ಸಲಿಂಗಿಗಳಿಗೆಸರ್ಕಾರಿ ಕಚೇರಿಗಳಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ನೀಡಲಾಗಿದೆ.
ಈ ಮಸೂದೆಯ ಪರ, ವಿರೋಧವಾಗಿ ಸಾಕಷ್ಟು ಹೋರಾಟಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ಎಲ್‌ಜಿಬಿಟಿ) ಐತಿಹಾಸಿಕ ಗೆಲುವು ಲಭಿಸಿದೆ.
ಪಾರ್ಲಿಮೆಂಟ್ ಮುಂದೆ ಜಮಾಯಿಸಿದ್ದ ಸಾವಿರಾರು ಮಂದಿ ಸಲಿಂಗ ಹಕ್ಕುಗಳ ಬೆಂಗಲಿಗರು, ವಿಜಯದ ಸಂಕೇತ ಪ್ರದರ್ಶಿಸಿ ಈ ಗೆಲುವನ್ನು ಸಂಭ್ರಮಿಸಿದರು.
ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ಸಲಿಂಗ ವಿವಾಹಕ್ಕೆ ಅವಕಾಶ ನೀಡದಿರುವುದು ಸಂವಿಧಾನ ವಿರೋಧಿ ಆಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. 2019 ಮೇ 24 ರವರೆಗೆ ಕಾಯ್ದೆಯ ತಿದ್ದುಪಡಿಗೆ ಸರ್ಕಾರಕ್ಕೆ ನ್ಯಾಯಾಲಯ ಅವಕಾಶ ನೀಡಿತ್ತು.
‘ಎರಡು ಸಲಿಂಗಿಕಾಮಿ ಜೋಡಿ ಮೇ24ರಂದು ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು. ದ್ವೀಪರಾಷ್ಟ್ರ, ಇತಿಹಾಸದಲ್ಲಿ ಹೊಸ ಅಧ್ಯಯನ ತೆರೆಯಲಿದೆ’ ಎಂದುನಾಗರಿಕ ಸಹಭಾಗಿತ್ವ ಹಕ್ಕುಗಳನ್ನು ಉತ್ತೇಜಿಸುವತೈವಾನ್ ಒಕ್ಕೂಟ ತಿಳಿಸಿದೆ.
ಈ ಕಾನೂನಿನ ಅಡಿಯ ವಿವಿಧ ಕಾಯ್ದೆಗಳ ಕುರಿತು ಇನ್ನೂ ಚರ್ಚೆ ನಡೆಯುತ್ತಿದ್ದು, ಶುಕ್ರವಾರ ಮತ ಚಲಾವಣೆ ನಡೆಯಿತು.
‘ಮಸೂದೆ ಅಂಗೀಕಾರದಿಂದ ಸಂತಸವಾಗಿದೆ. ಮದುವೆಯ ಪರಿಕಲ್ಪನೆಯನ್ನು ಹೊಸ ಕಾನೂನು ಗುರುತಿಸಿದೆ. ಮಕ್ಕಳ ದತ್ತು ಪಡೆಯುವುದು ಮತ್ತು ಬಾಡಿಗೆ ತಾಯ್ತನದ ಹಕ್ಕುಗಳಿಗಾಗಿ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಸಲಿಂಗಿ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.
ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ತೈವಾನ್‌ನಲ್ಲಿ ಸಲಿಂಗ ಪುರುಷ ಅಥವಾ ಸಲಿಂಗ ಮಹಿಳಾ ಜೋಡಿ ಮತ್ತು ಇತರ ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚಿನ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ. ವಾರ್ಷಿಕ‘ಗೇ ಪ್ರೈಡ್ ಪೆರೇಡ್’ ಇಲ್ಲಿ ಆಯೋಜಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.