ADVERTISEMENT

ತೈವಾನ್‌ನಲ್ಲಿವೆ ಅಮೆರಿಕ ಸೇನಾ ಪಡೆಗಳು: ಅಧ್ಯಕ್ಷೆ ತ್ಸಾಯ್‌

ಏಜೆನ್ಸೀಸ್
Published 28 ಅಕ್ಟೋಬರ್ 2021, 7:01 IST
Last Updated 28 ಅಕ್ಟೋಬರ್ 2021, 7:01 IST
ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್–ವೆನ್
ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್–ವೆನ್   

ತೈಪೆ: ಅಮೆರಿಕದ ಸಣ್ಣ ಪ್ರಮಾಣದ ಮಿಲಿಟರಿ ಪಡೆಗಳು ತೈವಾನ್‌ನಲ್ಲಿ ನೆಲೆಸಿದ್ದು, ಇಲ್ಲಿನ ಸೇನಾ ಸಿಬ್ಬಂದಿ ತರಬೇತಿಗೆ ನೆರವಾಗುತ್ತಿದ್ದಾರೆ ಎಂದು ಅಧ್ಯಕ್ಷೆ ತ್ಸಾಯ್‌ ಇಂಗ್‌–ವೆನ್‌ ದೃಢಪಡಿಸಿದ್ದಾರೆ.

ಸಿಎನ್‌ಎನ್‌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಚೀನಾದ ದಾಳಿಯ ವೇಳೆ ಅಮೆರಿಕ ಪಡೆಗಳು ನಮ್ಮ ದ್ವೀಪ ರಾಷ್ಟ್ರವನ್ನು ರಕ್ಷಿಸುವ ವಿಶ್ವಾಸವಿದೆ‘ ಎಂದು ಹೇಳಿದ್ದಾರೆ.

‘ತೈವಾನ್, ಪ್ರಾದೇಶಿಕ ಪ್ರಜಾಪ್ರಭುತ್ವ ‘ದ್ವೀಪ‘ರಾಷ್ಟ್ರ‘ ಎಂದು ಬಣ್ಣಿಸಿರುವ ತ್ಸಾಯ್, ಇದು ನೆರೆ ಹೊರೆಯಲ್ಲಿರುವ ದೈತ್ಯ ನಿರಂಕುಶ ಪ್ರಭುತ್ವ ರಾಷ್ಟ್ರಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಪ್ರತಿ ದಿನವೂ ಚೀನಾದಿಂದ ಬೆದರಿಕೆ ಹೆಚ್ಚಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ತೈವಾನ್‌ನಲ್ಲಿ ಅಮೆರಿಕದ ಪಡೆಗಳ ಉಪಸ್ಥಿತಿಯನ್ನು ಈ ತಿಂಗಳ ಆರಂಭದಲ್ಲೇ ಅಮೆರಿಕದ ಪೆಂಟಗನ್‌ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆ ಮತ್ತು ಇತರ ಮಾಧ್ಯಮಗಳಿಗೆ ದೃಢಪಡಿಸಿದ್ದರು.

‘ತೈವಾನ್‌ನಲ್ಲಿ ಎಷ್ಟು ಅಮೆರಿಕ ಪಡೆಗಳು ನೆಲೆಸಿವೆ‘ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ‘ಜನರು ಅಂದುಕೊಂಡಷ್ಟು ಸಂಖ್ಯೆಯಲ್ಲಿ ಸೇನಾಪಡೆಗಳಿಲ್ಲ‘ ಎಂದಷ್ಟೇ ತ್ಸಾಯ್ ಉತ್ತರಿಸಿದರು.

‘ನಮ್ಮ ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯೊಂದಿಗೆ ನಾವು ಅಮೆರಿಕದೊಂದಿಗೆ ವ್ಯಾಪಕವಾದ ಸಹಕಾರವನ್ನು ಹೊಂದಿದ್ದೇವೆ‘ ಎಂದು ಅವರು ಸ್ಪಷ್ಟಪಡಿಸಿದರು.

1979ರಲ್ಲಿ ಅಮೆರಿಕದ ಸೇನಾ ತುಕಡಿ ತೈವಾನ್‌ ತೊರೆದು, ಚೀನಾದ ರಾಜತಾಂತ್ರಿಕತೆಯನ್ನು ಒಪ್ಪಿಕೊಂಡಿತ್ತು. ಇದಾದ ಬಳಿಕ ಇದೇ ಪ್ರಥಮ ಬಾರಿಗೆ ತೈವಾನ್‌ನ ನಾಯಕರೊಬ್ಬರಿಂದ ಇಂತಹ ಹೇಳಿಕೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.