
ಅಮ್ಮಾನ್: ದೊರೆ 2ನೇ ಅಬ್ದುಲ್ಲಾ ಅವರೊಂದಿಗೆ ನಡೆದ ಮಾತುಕತೆ, ನವೀಕರಿಸಬಹುದಾದ ಇಂಧನ, ಜಲ ನಿರ್ವಹಣೆ, ಡಿಜಿಟಲ್ ರೂಪಾಂತರ, ಸಾಂಸ್ಕೃತಿಕ ವಿನಿಮಯ ಮತ್ತು ಪಾರಂಪರಿಕ ಸಹಕಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ–ಜೋರ್ಡಾನ್ ಪಾಲುದಾರಿಕೆಯನ್ನು ಬಲಪಡಿಸಲಾಗಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ಹೇಳಿದ್ದಾರೆ.
‘ನನ್ನ ಜೋರ್ಡಾನ್ ಪ್ರವಾಸ ಫಲಪ್ರದವಾಗಿದೆ’ ಎಂದು ಮೋದಿ ಹೇಳಿದ್ದಾರೆ.
ತಮ್ಮ ಎರಡು ದಿನಗಳ ಪ್ರವಾಸದ ಕೊನೆಯಲ್ಲಿ, ದೊರೆ 2ನೇ ಅಬ್ದುಲ್ಲಾ ಮತ್ತು ಜೋರ್ಡಾನ್ ಜನತೆಯ ಸ್ನೇಹಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
‘ನಾವು ಒಟ್ಟಾಗಿ ಮಾಡಲಿರುವ ಸಾಧನೆಗಳು ನಮ್ಮ ಪ್ರಜೆಗಳಿಗೆ ಪ್ರಗತಿ ಮತ್ತು ಸಮೃದ್ಧಿಗೆ ಹೊಸ ದಾರಿಗಳನ್ನು ತೆರೆಯಲಿವೆ’ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಮೋದಿ ಅವರು 2ನೇ ಅಬ್ದುಲ್ಲಾ ಅವರೊಂದಿಗೆ ಹುಸೇನಿಯಾ ಅರಮನೆಯಲ್ಲಿ ಸೋಮವಾರ ಸಭೆ ನಡೆಸಿದರು.
ಮಂಗಳವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಪರಸ್ಪರ ನಂಬಿಕೆ, ಸೌಹಾರ್ದತೆ ಮತ್ತು ಸದ್ಭಾವನೆಯಿಂದ ರೂಪಿಸಲ್ಪಟ್ಟ ತಮ್ಮ ದೇಶಗಳ ನಡುವಿನ ದೀರ್ಘ ಕಾಲದ ಸಂಬಂಧವನ್ನು ಉಭಯ ನಾಯಕರು ಶ್ಲಾಘಿಸಿದರು.
ಇಥಿಯೋಪಿಯಾದತ್ತ ಪ್ರಧಾನಿ
ತಮ್ಮ ನಾಲ್ಕು ದಿನಗಳ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದಲ್ಲಿ ಮಂಗಳವಾರ ಪ್ರಧಾನಿ ಮೋದಿ ಜೋರ್ಡಾನ್‌ನಿಂದ ಇಥಿಯೋಪಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಅವರನ್ನು ಜೋರ್ಡಾನ್ ರಾಜಕುಮಾರ್ ಅಲ್ ಹುಸೇನ್ ಬಿನ್ 2ನೇ ಅಬ್ದುಲ್ಲಾ ಅವರು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ವಿಶೇಷ ವಿದಾಯ ಹೇಳಿದರು. ಇಥಿಯೋಪಿಯಾಗೆ ತಮ್ಮ ಮೊದಲ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ‘ಪ್ರಜಾಪ್ರಭುತ್ವದ ತಾಯಿ’ಯಾಗಿ ಭಾರತದ ಪ್ರಯಾಣ ಮತ್ತು ಭಾರತ–ಇಥಿಯೋಪಿಯಾ ಪಾಲುದಾರಿಕೆಯು ಜಗತ್ತಿನ ದಕ್ಷಿಣಕ್ಕೆ ನೀಡಬಹುದಾದದ ಮೌಲ್ಯದ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.