ADVERTISEMENT

ಕೊರೊನ ಸೊಂಕು: ಅಮೆರಿಕದ ಶಾಲೆಗಳಲ್ಲಿ ಶಿಕ್ಷಕರ ಕೊರತೆ

ನಿವೃತ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವ, ದೀರ್ಘ ರಜೆ ಪಡೆಯುತ್ತಿರುವ ಶಿಕ್ಷಕರು

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 7:14 IST
Last Updated 14 ಸೆಪ್ಟೆಂಬರ್ 2020, 7:14 IST
ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಶಾಲೆಗೆ ಮರಳಿರುವ ಶಿಕ್ಷಕರೊಬ್ಬರು, ಪಾಠ ಮಾಡಲು ಸಿದ್ಧತೆ ನಡೆಸುತ್ತಿರುವುದು
ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಶಾಲೆಗೆ ಮರಳಿರುವ ಶಿಕ್ಷಕರೊಬ್ಬರು, ಪಾಠ ಮಾಡಲು ಸಿದ್ಧತೆ ನಡೆಸುತ್ತಿರುವುದು   

ಇಂಡಿಯಾನಾಪೊಲಿಸ್ (ಅಮೆರಿಕ)‌: ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಅಮೆರಿಕದ ಹಲವೆಡೆ ಶಿಕ್ಷಕರು ಶಾಲೆಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದು, ಪರ್ಯಾಯವಾಗಿ ಬದಲಿ ಶಿಕ್ಷಕಕರನ್ನು ಹೊಂದಿಸುವುದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹರಸಾಹಸಪಡುತ್ತಿವೆ. ಕೆಲವು ಕಡೆ ಶಿಕ್ಷಕರ ಕೊರತೆ ತುಂಬಿಕೊಳ್ಳಲು ಉದ್ಯೋಗಕ್ಕೆ ನಿಗದಿಪಡಿಸಿದ್ದ ವಿದ್ಯಾರ್ಹತೆ ಪ್ರಮಾಣವನ್ನೇ ಕಡಿತಗೊಳಿಸಿವೆ.

ಕೆಲವು ರಾಜ್ಯಗಳಲ್ಲಿ ಶಿಕ್ಷಕರು ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.ಲಭ್ಯ ಅಂಕಿ ಅಂಶಗಳ ಪ್ರಕಾರ, ಇಂಡಿಯಾನಾದಾದ್ಯಂತ ಜುಲೈ ತಿಂಗಳಲ್ಲಿ 600ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ರಜೆ ತೆಗೆದುಕೊಳ್ಳುವ ಮೂಲಕ ಶಾಲೆಗೆ ಗೈರು ಹಾಜರಾಗುತ್ತಿದ್ದಾರೆ. ಹೀಗೆ ಶಿಕ್ಷಕರ ನಿರ್ಗಮನದಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ತಲ್ಲಣಗಳು ಸೃಷ್ಟಿಯಾಗಿವೆ.

ಇಂಥ ಸಂಕಷ್ಟಗಳ ನಡುವೆ ಇಂಡಿಯಾನಪೊಲಿಸ್‌ನ ಈಶಾನ್ಯ ಭಾಗದಲ್ಲಿರುವ ಗ್ರಿಫ್ತ್‌ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ 57ರ ಹರೆಯದ ಕಯ್‌ ಒರ್ಝೆಚೊವಿಕ್ಜ ಅವರು ಇನ್ನೂ ಒಂದಷ್ಟು ವರ್ಷ ಶಿಕ್ಷಕ ವೃತ್ತಿ ಮುಂದುವರಿಸಲು ಆಸಕ್ತಿ ತೋರಿದ್ದಾರೆ. ಆದರೆ, ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡದಿರುವುದರ ಬಗ್ಗೆ ಅವರು ಆಕ್ಷೇಪಿಸುತ್ತಾರೆ. ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರಿಗೆ ಸುರಕ್ಷತೆ ಒದಗಿಸುವ ವಿಚಾರದಲ್ಲೂ ಅವರಿಗೆ ಆತಂಕವಿದೆ.

ADVERTISEMENT

ಇದರ ಜತೆಗೆ ಶಾಲೆಯಲ್ಲಿ ತಂತ್ರಜ್ಞಾನದ ಅವಶ್ಯಕತೆ ಮತ್ತು ವಿಡಿಯೊ ಮೂಲಕ ಪಾಠ ಮಾಡುವಂತೆ ಒತ್ತಡ ಹೇರುವ ಕುರಿತು ಪ್ರತಿಕ್ರಿಯಿಸಿರುವ ಓರ್ಜೆಕೊವಿಕ್ಜ್, ’ನಾನು ಶಿಕ್ಷಕಿಯಾದ ದಿನದಿಂದಲೂ ಇಲ್ಲಿವರೆಗೆ ಒಮ್ಮೆಯೂ ತಂತ್ರಜ್ಞಾನವನ್ನು ಬಳಸಿಕೊಂಡು ಪಾಠ ಮಾಡಿಲ್ಲ’ ಎಂದು ಹೇಳಿದ್ದಾರೆ. ’ಒಟ್ಟಾರೆ, ಈ ಶಾಲೆಯಲ್ಲಿ ಶಿಕ್ಷಕರು ಮತ್ತವರ ಜೀವನಕ್ಕೆ ಬೆಲೆ ಇರಲಿಲ್ಲ. ಗೌರವಿಸುತ್ತಿರಲಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಮೆರಿಕದ ಟ್ರಂಪ್ ಆಡಳಿತ ಶಿಕ್ಷಕರನ್ನು ’ತುರ್ತು ಮೂಲಸೌಕರ್ಯಕ್ಕಾಗಿ ನೆರವಾಗುವ ಕೆಲಸಗಾರರು’ ಎಂದು ಘೋಷಿಸಿರುವ ಕಾರಣ, ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾದರೂ, ಶಾಲೆಗೆ ಬಂದು ಪಾಠ ಮಾಡಬೇಕೆಂಬ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆದರೆ, ಇಲ್ಲಿವರೆಗೂ ಎಷ್ಟು ಮಂದಿ ಶಿಕ್ಷಕರು ಕೊರೊನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದಾರೆಂಬ ಮಾಹಿತಿ ಇಲ್ಲ. ಆದರೆ, ಮಿಸಿಸಿಪ್ಪಿನಲ್ಲೇ 604 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.