
ಕರಾಕಸ್ (ವೆನೆಜುವೆಲಾ): ಅಮೆರಿಕದ ಸೇನಾ ಕಾರ್ಯಾಚರಣೆಯ ಮರುದಿನ ವೆನೆಜುವೆಲಾದ ರಾಜಧಾನಿ ಕರಾಕಸ್ ಸೇರಿದಂತೆ ಹಲವೆಡೆ ನಾಗರಿಕರು ಆತಂಕದಲ್ಲೇ ಕಾಲ ಕಳೆದರು.
ಕರಾಕಸ್‌ನ ರಸ್ತೆಗಳಲ್ಲಿ ಭಾನುವಾರ ವಾಹನಗಳ ಓಡಾಟ ವಿರಳವಾಗಿತ್ತು. ಸಾಮಾನ್ಯವಾಗಿ ವಾಯುವಿಹಾರಿಗಳು ಮತ್ತು ಸೈಕ್ಲಿಸ್ಟ್‌ಗಳಿಂದ ತುಂಬಿರುತ್ತಿದ್ದ ಬೀದಿಗಳು ಬಿಕೋ ಎನ್ನುತ್ತಿದ್ದವು. ಹೆಚ್ಚಿನ ಅಂಗಡಿಗಳು ಬಾಗಿಲು ಮುಚ್ಚಿದ್ದವು.
ಅಮೆರಿಕ ಮತ್ತೆ ದಾಳಿ ನಡೆಸಬಹುದು ಎಂಬ ಆತಂಕ ಇರುವ ಕಾರಣ ಜನರು ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ದಿನಸಿ ಅಂಗಡಿಗಳ ಮುಂದೆ ಉದ್ದನೆಯ ಸಾಲು ಕಂಡುಬಂತು. ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸಲು ಮುಗಿಬಿದ್ದ ಕಾರಣ ಗ್ಯಾಸ್ ಸ್ಟೇಷನ್‌ಗಳ ಮುಂದೆಯೂ ದಟ್ಟಣೆ ಕಂಡುಬಂತು.
ರಾಜಧಾನಿಯ ಹೊರವಲಯದ ಲಾ ಗುಯಿರಾ ಪ್ರದೇಶದಲ್ಲಿ ವಾಯುದಾಳಿಯಿಂದ ಹಲವು ಮನೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿದ್ದು, ಅಲ್ಲಿನ ನಿವಾಸಿಗಳು ಅವಶೇಷಗಳನ್ನು ತೆರವುಗೊಳಿಸುತ್ತಿದ್ದ ದೃಶ್ಯ ಕಂಡುಬಂತು. ಇಲ್ಲಿ ಕೆಲವು ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿವೆ.