ADVERTISEMENT

ಶಸ್ತ್ರಾಸ್ತ್ರ ಸಂಘರ್ಷಕ್ಕೆ ಗುರಿಯಾದ ಮಕ್ಕಳ ನಿರ್ವಹಣೆ: ಸಿದ್ಧ ಸೂತ್ರಕ್ಕೆ ಸಲಹೆ

ಪಿಟಿಐ
Published 30 ಜನವರಿ 2021, 7:00 IST
Last Updated 30 ಜನವರಿ 2021, 7:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ‘ಶಸ್ತ್ರಾಸ್ತ್ರಗಳ ಸಂಘರ್ಷ’ದ ಪರಿಣಾಮಕ್ಕೆ ಗುರಿಯಾಗಿರುವ ಮಕ್ಕಳ ಪುನರ್ವಸತಿ, ವಾಪಸಾತಿ ಕುರಿತು ಸಿದ್ಧ ಸೂತ್ರದ ಅಗತ್ಯವಿದೆ’ ಎಂದು ಭಾರತವು ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದೆ. ಅಲ್ಲದೆ, ಇಂಥ ಮಕ್ಕಳನ್ನು ‘ವಿದೇಶಿ ಭಯೋತ್ಪಾದಕ ಹೋರಾಟಗಾರರು’ ಎಂದು ಪರಿಗಣಿಸುವುದು ಅಮಾನವೀಯವಾದುದು ಎಂದೂ ಹೇಳಿದೆ.

‘ಮಕ್ಕಳು ಮತ್ತು ಶಸ್ತ್ರಾಸ್ತ್ರ ಸಂಘರ್ಷ’ ವಿಷಯ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮುಕ್ತ ಸಭೆಯಲ್ಲಿ ಮಾತನಾಡಿದ, ವಿಶ್ವಸಂಸ್ಥೆ ರಾಯಭಾರ ಕಚೇರಿಯಲ್ಲಿ ಭಾರತದ ಉಪ ಶಾಶ್ವತ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು ಈ ನಿಲುವು ತಿಳಿಸಿದರು.

ಭದ್ರತಾ ಮಂಡಳಿಯ 2178ನೇ (2014) ನಿರ್ಣಯವು ಯಾರು ವಿದೇಶಿ ಭಯೋತ್ಪಾದಕ ಹೋರಾಟಗಾರರು ಎಂಬುದರ ಕುರಿತು ವ್ಯಾಖ್ಯಾನವನ್ನು ನೀಡಲಿದೆ. ಈ ಕುರಿತು ರಷ್ಯಾ ಮುಕ್ತ ಸಭೆಯನ್ನು ಆಯೋಜಿಸಿತ್ತು.

ADVERTISEMENT

‘ವಿದೇಶಿ ಭಯೋತ್ಪಾದಕ ಹೋರಾಟಗಾರ’ ಎಂಬುದನ್ನು ಅವರ ಕುಟುಂಬ ಸದಸ್ಯರಿಗೂ ಅನ್ವಯಿಸಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಮಕ್ಕಳಿಗೆ ಅನ್ವಯಿಸಿ ಹೀಗೆ ಬಳಸುವುದು ಅಮಾನವೀಯವಾದ ಕ್ರಮ ಎಂದು ಭಾರತ ಹೇಳಿದೆ.

‘ವಿದೇಶಿ ಭಯೋತ್ಪಾದಕ ಹೋರಾಟಗಾರರು’ ಎಂಬುದರಿಂದ ಬಾಧಿತರಾದ ಮಕ್ಕಳನ್ನು ಗೌರವ, ರಕ್ಷಣಾತ್ಮಕವಾಗಿ ಹಾಗೂ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾಯ್ದೆಯ ಅನುಸಾರ ಅವರ ಹಕ್ಕುಗಳ ರಕ್ಷಣೆ ಉದ್ದೇಶದಿಂದ ನಡೆಸಿಕೊಳ್ಳಬೇಕು. ಮುಖ್ಯವಾಗಿ ಅಂತರರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳು, ಅಂತರರಾಷ್ಟ್ರೀಯ ಮಾನವೀಯ ಕಾಯ್ದೆ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಸ್ಥಳೀಯವಾಗಿ ಇರುವ ರಾಷ್ಟ್ರೀಯ ಕಾಯ್ದೆಗಳಿಗೆ ಪೂರಕವಾಗಿ ಬಳಕೆಯಾಗಬೇಕು ಎಂದು ಹೇಳಿದೆ.

ಈ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳು ವಿದೇಶಿ ಭಯೋತ್ಪಾದಕ ಹೋರಾಟಗಾರರ ಶಿಕ್ಷೆ, ಪುನರ್ವಸತಿ, ವಾಪಸಾತಿ ಕುರಿತಂತೆ ಸಿದ್ಧಸೂತ್ರವನ್ನು ರೂಪಿಸುವ ತುರ್ತು ಅಗತ್ಯವನ್ನು ಮನಗಾಣಬೇಕು ಎಂದು ನಾಯ್ಡು ಅವರು ಪ್ರತಿಪಾದಿಸಿದರು.

ಈ ವಿಷಯದಲ್ಲಿ ಬಹುಹಂತದ ಸವಾಲುಗಳಿವೆ. ’ವಿದೇಶಿ ಭಯೋತ್ಪಾದಕ ಹೋರಾಟಗಾರ’ರಿಗೆ ಸಂಬಂಧಿಸಿದ ವಿಷಯ ಮಾಹಿತಿ ಸಂಗ್ರಹ, ನಿರ್ವಹಣೆ, ಸಂಗ್ರಹಣೆ, ಅಗತ್ಯ ಸಾಕ್ಷ್ಯಗಳನ್ನು ದೇಶೀಯ ಕಾಯ್ದೆಗಳಿಗೆ ಬದ್ಧವಾಗಿ ವಿನಿಮಯ ಹಾಗೂ ಅಂತರ ರಾಷ್ಟ್ರೀಯ ಕಾಯ್ದೆಗೆ ಪೂರಕವಾಗಿ ಸಂಘರ್ಷಕ್ಕೆ ಸಂಬಂಧಿಸಿದ ದೇಶಗಳಿಂದ ಮಾಹಿತಿ ಪಡೆಯುವ ಸವಾಲಿದೆ ಎಂದರು.

ಕೆಲವು ದೇಶಗಳು ಈ ನಿಟ್ಟಿನಲ್ಲಿ ಸುಧಾರಣೆ ತರಲು ಮುಂದಾಗಿವೆ. ಆದರೆ, ಆ ವೇಗ ತುಂಬ ನಿಧಾನಗತಿಯಯಲ್ಲಿದೆ. ಶಸ್ತ್ರಾಸ್ತ್ರ ಸಂಘರ್ಷಕ್ಕೆ ತುತ್ತಾದ ಹದಿಹರೆಯದವರನ್ನು ವಾಪಸು ಪಡೆಯುವುದು ಆಯಾ ಸಂದರ್ಭಗಳನ್ನು ಆಧರಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.