ಬ್ಯಾಕಾಂಕ್: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಸೇನೆಗಳು ಗುರುವಾರ ಪರಸ್ಪರ ದಾಳಿ ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.
ರಾಕೆಟ್ ಮತ್ತು ಫಿರಂಗಿ ಶೆಲ್‌ಗಳನ್ನು ಥಾಯ್ಲೆಂಡ್ ಮೇಲೆ ಕಾಂಬೋಡಿಯಾ ಹಾರಿಸಿದೆ. ಥಾಯ್ಲೆಂಡ್ ಎಫ್–16 ಜೆಟ್ ಸಹಾಯದಿಂದ ವೈಮಾನಿಕ ದಾಳಿ ನಡೆಸಿದೆ. ಕಾಬೋಡಿಯಾದ ಭೂಸೇನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಥಾಯ್ಲೆಂಡ್ ಸೇನೆ ತಿಳಿಸಿದೆ.
‘ಒಬ್ಬರು ಸೈನಿಕರು ಮತ್ತು 11 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಪೆಟ್ರೋಲ್ ಬಂಕ್‌ವೊಂದರ ಮೇಲೆ ರಾಕೆಟ್ ದಾಳಿ ನಡೆದಿದ್ದು, ಹೆಚ್ಚಿನವರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. 35 ನಾಗರಿಕರು ಗಾಯಗೊಂಡಿದ್ದಾರೆ’ ಎಂದು ಥಾಯ್ಲೆಂಡ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಡಿಯುದ್ದಕ್ಕೂ ಕನಿಷ್ಠ ಆರು ಪ್ರಾಂತ್ಯಗಳಲ್ಲಿ ಘರ್ಷಣೆ ಮುಂದುವರೆದಿದೆ ಎಂದು ಥಾಯ್ಲೆಂಡ್ ರಕ್ಷಣಾ ಸಚಿವಾಲಯದ ವಕ್ತಾರ ಸುರಸಂತ್ ಕೊಂಗ್ಸಿರಿ ಹೇಳಿದ್ದಾರೆ.
ಥಾಯ್ಲೆಂಡ್ ತನ್ನ ನಾಗರಿಕರಿಗೆ ಕಾಂಬೋಡಿಯಾ ತೊರೆಯುವಂತೆ ಒತ್ತಾಯಿಸಿದ್ದು, ಎಲ್ಲ ಭೂಗಡಿಗಳನ್ನು ಮುಚ್ಚಿದೆ. ಮೇ ತಿಂಗಳಲ್ಲಿ ನಡೆದ ಸಶಸ್ತ್ರ ಮುಖಾಮುಖಿಯಲ್ಲಿ ಕಾಂಬೋಡಿಯಾದ ಸೈನಿಕರೊಬ್ಬರು ಮೃತಪಟ್ಟ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.