ಎಐ ಚಿತ್ರ
ಬ್ಯಾಂಕಾಕ್: ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮದ್ಯ ಮಾರಾಟದ ಮೇಲಿನ ನಿಯಮಗಳನ್ನು ಸಡಿಲಿಸಿರುವ ಥಾಯ್ಲೆಂಡ್, ಮಧ್ಯಾಹ್ನದ ನಂತರ ಮದ್ಯ ಮಾರಾಟಕ್ಕಿದ್ದ ನಿಷೇಧವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ.
ಮುಂದಿನ ಆರು ತಿಂಗಳವರೆಗೆ ಮದ್ಯದಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಮಾನ್ಯತೆ ಪಡೆದ ಸಂಸ್ಥೆಗಳು ಬೆಳಿಗ್ಗೆ 11 ರಿಂದ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಮಾಡಬಹುದಾಗಿದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ ಥಾಯ್ಲೆಂಡ್ ಪ್ರವಾಸಗೊಳ್ಳುವವರ ಸಂಖ್ಯೆ ಹೆಚ್ಚಲಿದ್ದು, ಈ ಕ್ರಮ ಕೈಗೊಳ್ಳಲಾಗಿದೆ.
ಮಧ್ಯಾಹ್ನದ ಮೇಲೆ ಮದ್ಯ ಮಾರಾಟಕ್ಕೆ ಅನುಮತಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಪ್ರಧಾನ ಮಂತ್ರಿ ಸೋಫೋನ್ ಸರಮ್, ‘ಹಿಂದೆ ಸರ್ಕಾರಿ ನೌಕರರು ಮದ್ಯಪಾನ ಮಾಡಲು ಹೊರಗೆ ಹೋಗುತ್ತಾರೆ ಎಂಬ ಕಳವಳವಿತ್ತು. ಆದರೆ ಈಗ ಕಾಲ ಬದಲಾಗಿದೆ’ ಎಂದಿದ್ದಾರೆ.
ಮದ್ಯ ಮಾರಾಟಕ್ಕೆ ಅನುಮತಿ ನೀಡುವುದರ ಜೊತೆಗೆ ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ಸರ್ಕಾರ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ನೌಕರರು ಕೆಲಸದ ಸಮಯದಲ್ಲಿ ಮದ್ಯಪಾನ ಮಾಡುವುದನ್ನು ತಡೆಯುವ ಉದ್ದೇಶದಿಂದ 1972ರಲ್ಲಿ ಮಧ್ಯಾಹ್ನದ ಮೇಲೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಈ ನಿಯಮದಿಂದ ಪ್ರವಾಸೋದ್ಯಮಕ್ಕೆ ತೊಡಕಾಗುತಿತ್ತು ಎಂದು ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಥಾಯ್ಲೆಂಡ್ ಏಷ್ಯಾದಲ್ಲೇ ಅತಿ ಹೆಚ್ಚು ಮದ್ಯ ಸೇವನೆ ಮಾಡುವ ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.