ಮ್ಯಾನ್ಮಾರ್‌ನಲ್ಲಿ ಭೂಕಂಪ
–ರಾಯಿಟರ್ಸ್ ಚಿತ್ರ
ಬ್ಯಾಂಕಾಕ್: ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ಮೃತರು ಮತ್ತು ಗಾಯಗೊಂಡವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಭೂಕಂಪದಿಂದಾಗಿ ಮ್ಯಾನ್ಮಾರ್‌ನಲ್ಲಿ ಮೃತಪಟ್ಟವರ ಸಂಖ್ಯೆ 1,002ಕ್ಕೆ ಏರಿಕೆಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಶುಕ್ರವಾರ 7.7ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
‘ಭೂಕಂಪದಿಂದಾಗಿ ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳಂತಹ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದು, ಜನರ ಸಾವುನೋವು ಮತ್ತು ಗಾಯಾಳುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಸರ್ಕಾರ ತಿಳಿಸಿದೆ.
ಭೂಕಂಪ ಪೀಡಿತ ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳಿಗೆ ಭಾರತ, ಚೀನಾ, ರಷ್ಯಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ನೆರವು ನೀಡುವುದಾಗಿ ಘೋಷಿಸಿವೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ 30 ಮಹಡಿಯ ಸರ್ಕಾರಿ ಕಟ್ಟಡ ನೆಲಕ್ಕುರುಳಿದೆ. ಮ್ಯಾನ್ಮಾರ್ ಸರ್ಕಾರವು 6 ವಲಯಗಳಲ್ಲಿ ತುರ್ತುಸ್ಥಿತಿ ಘೋಷಿಸಿದೆ. ಮ್ಯಾನ್ಮಾರ್‌ನ 2ನೇ ಅತಿದೊಡ್ಡ ನಗರವಾಗಿರುವ ಮ್ಯಾಂಡಲೆ ಭೂಕಂಪದ ಕೇಂದ್ರಬಿಂದುವಾಗಿದೆ.
ಅಮೆರಿಕದ ಭೂವಿಜ್ಞಾನ ಕೇಂದ್ರದ ಪ್ರಕಾರ, ಕೇಂದ್ರ ಬಿಂದುವಿನಲ್ಲಿ ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ಅದರ ತೀವ್ರತೆಯು ಕೇಂದ್ರಬಿಂದುವಿನಿಂದ 10 ಕಿ.ಮೀ ಪರಿಧಿಯಲ್ಲಿ ವ್ಯಕ್ತವಾಗಿದೆ ಎಂದು ಅಂದಾಜು ಮಾಡಿದೆ.
ಮೊದಲಿಗೆ 7.7 ತೀವ್ರತೆಯ ಭೂಕಂಪನವಾಗಿದ್ದು, 11 ನಿಮಿಷದ ತರುವಾಯ ಮತ್ತೆ 6.4 ತೀವ್ರತೆಯ ಭೂಕಂಪ ಸಂಭವಿಸಿರುವುದು ದಾಖಲಾಗಿದೆ. 7.7 ತೀವ್ರತೆಯು ಹೆಚ್ಚು ಪ್ರಬಲವಾದುದು ಎಂದು ಕೇಂದ್ರವು ವಿಶ್ಲೇಷಿಸಿದೆ.
ಭೂಕಂಪದ ಅನುಭವವಾದಂತೆ ಬ್ಯಾಂಕಾಕ್ ನಗರದಲ್ಲಿ ಎಚ್ಚರಿಕೆ ಗಂಟೆಯನ್ನು ಮೊಳಗಿಸಲಾಯಿತು. ಬ್ಯಾಂಕಾಕ್‌ನ ಒಟ್ಟು ಜನಸಂಖ್ಯೆ 1.7 ಕೋಟಿಗೂ ಹೆಚ್ಚಿದ್ದು, ಹೆಚ್ಚಿನವರು ಬಹುಮಹಡಿ ವಸತಿ ಸಂಕೀರ್ಣಗಳಲ್ಲಿಯೇ ವಾಸವಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.