ADVERTISEMENT

ಸಲಿಂಗ ವಿವಾಹ ಅನುಮತಿಗೆ ಥಾಯ್ಲೆಂಡ್‌ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 13:50 IST
Last Updated 21 ನವೆಂಬರ್ 2023, 13:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬ್ಯಾಂಕಾಕ್‌: ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ನಾಗರಿಕ ಸಂಹಿತೆಯ ತಿದ್ದುಪಡಿಗೆ ಥಾಯ್ಲೆಂಡ್‌ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಈ ಕುರಿತ ಕರಡು ಮಸೂದೆಯು ಮುಂದಿನ ತಿಂಗಳು ನಡೆಯುವ ಸಂಸತ್ತಿನ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.

ADVERTISEMENT

ಸಿವಿಲ್‌ ಮತ್ತು ವಾಣಿಜ್ಯ ಸಂಹಿತೆಯ ತಿದ್ದುಪಡಿಯು ಸಲಿಂಗ ದಂಪತಿಗಳಿಗೆ, ‘ಪುರುಷರು ಮತ್ತು ಮಹಿಳೆಯರು’ ಮತ್ತು ‘ಪತಿ ಮತ್ತು ಪತ್ನಿ’ ಎಂಬ ಪದಗಳನ್ನು ‘ವ್ಯಕ್ತಿಗಳು’ ಮತ್ತು ‘ವಿವಾಹದ ಪಾಲುದಾರರು’ ಎಂದು ಬದಲಿಸುತ್ತದೆ. ಭಿನ್ನಲಿಂಗೀಯ ದಂಪತಿಗಳು ಹೊಂದುವ ಹಕ್ಕುಗಳನ್ನು ಇವರೂ ಹೊಂದುತ್ತಾರೆ ಎಂದು ಸರ್ಕಾರದ ಉಪ ವಕ್ತಾರರಾದ ಕರೋಮ್‌ ಪೋಲ್ಪೋರ್ನ್‌ಕ್ಲಾಂಗ್‌ ಮಾಹಿತಿ ನೀಡಿದರು.

ಸಲಿಂಗ ದಂಪತಿಗಳು ತಮ್ಮದೇ ಆದ ಕುಟುಂಬ ರಚಿಸಿಕೊಳ್ಳುವ ಹಕ್ಕನ್ನೂ ಕಾನೂನಿನ ಮೂಲಕ ಖಾತರಿಪಡಿಸಲಾಗುತ್ತದೆ ಎಂದು ಹೇಳಿದ ಅವರು, ಮುಂದಿನ ಹಂತದಲ್ಲಿ ಸಲಿಂಗ ದಂಪತಿಗಳನ್ನು ಗುರುತಿಸಲು ಪಿಂಚಣಿ ನಿಧಿ ಕಾನೂನಿಗೂ ತಿದ್ದುಪಡಿ ತರಲಾಗುವುದು ಎಂದರು.

ಈ ಕುರಿತ ಕರಡು ಮಸೂದೆಯನ್ನು ಡಿಸೆಂಬರ್‌ 12ರಂದು ಸಂಸತ್ತಿನಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಇದೆ ಎಂದು ಪ್ರಧಾನಿ ಸ್ರೆಥಾ ಥವಿಸಿನ್ ಸುದ್ದಿಗಾರರಿಗೆ ಹೇಳಿದರು. 

ಸಂಸತ್ತಿನಲ್ಲಿ ಅಂಗೀಕಾರ ದೊರೆತ ಬಳಿಕ ಅದು ಅನುಮೋದನೆಗಾಗಿ ರಾಜ ಮಹಾ ವಜಿರಾಲಾಂಗ್‌ಕಾರ್ನ್ ಅವರ ಬಳಿಗೆ ಹೋಗುತ್ತದೆ. ಅವರ ಅಂಕಿತದ ಬಳಿಕ ಅದು ಕಾನೂನಾಗಿ ಜಾರಿಯಾಗುತ್ತದೆ. ಇದು ಕಾನೂನಾದರೆ, ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಏಷ್ಯಾದ ಮೂರನೇ ದೇಶ ಥಾಯ್ಲೆಂಡ್‌ ಆಗಲಿದೆ. ಇದಕ್ಕೂ ಮುನ್ನ ತೈವಾನ್‌, ನೇಪಾಳ ದೇಶಗಳು ಈ ಕುರಿತು ಕ್ರಮ ತೆಗೆದುಕೊಂಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.