ADVERTISEMENT

ಕೋವಿಡ್–19: ಮೃತರ ಸಂಖ್ಯೆ 2,715ಕ್ಕೆ ಏರಿಕೆ

ಪಿಟಿಐ
Published 26 ಫೆಬ್ರುವರಿ 2020, 19:54 IST
Last Updated 26 ಫೆಬ್ರುವರಿ 2020, 19:54 IST
ಸೋಂಕಿಗೆ ಗುರಿಯಾಗಿರುವ ಉಪ ಆರೋಗ್ಯ ಸಚಿವ ಇರಾಜ್ ಹರರ್ಚಿ –ಎಎಫ್‌ಪಿ ಚಿತ್ರ
ಸೋಂಕಿಗೆ ಗುರಿಯಾಗಿರುವ ಉಪ ಆರೋಗ್ಯ ಸಚಿವ ಇರಾಜ್ ಹರರ್ಚಿ –ಎಎಫ್‌ಪಿ ಚಿತ್ರ   

ಬೀಜಿಂಗ್/ನವದೆಹಲಿ: ಕೋವಿಡ್–19 ವೈರಸ್ ಸೋಂಕಿನಿಂದಾಗಿ ಚೀನಾದ ಹುಬೆ ಪ್ರಾಂತ್ಯದಲ್ಲಿ 52 ಮಂದಿ ಮೃತಪಟ್ಟಿದ್ದು, ಇದರಿಂದಾಗಿ ಈವರೆಗಿನ ಸಾವಿನ ಸಂಖ್ಯೆ 2,715ಕ್ಕೆ ಏರಿಕೆಯಾಗಿದೆ. ಸೋಂಕು ದೃಢಪಟ್ಟವರ ಸಂಖ್ಯೆ 78,064 ತಲುಪಿದೆ.

‘ಸೋಂಕು ಹೊಂದಿದವರೊಂದಿಗೆ ಸಂಪರ್ಕದಲ್ಲಿದ್ದ 6.47 ಲಕ್ಷ ಜನರನ್ನು ಪತ್ತೆ ಮಾಡಲಾಗಿದ್ದು, 79 ಸಾವಿರ ಜನರನ್ನು ವೈದ್ಯಕೀಯ ನಿಗಾದಲ್ಲಿ ಇರಿಸ
ಲಾಗಿದೆ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಇರಾನ್‌ನಲ್ಲಿ 4 ಸಾವು: ಇರಾನ್‌ನಲ್ಲಿ ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದಾಗಿ ಇಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ತಲುಪಿದೆ. ಉಪ ಆರೋಗ್ಯ ಸಚಿವ ಸೇರಿದಂತೆ 139 ಜನರು ಸೋಂಕಿಗೆ ಗುರಿಯಾಗಿದ್ದಾರೆ.

ADVERTISEMENT

ವುಹಾನ್ ತಲುಪಿದ ವಿಮಾನ: ‘ಸೋಂಕಿನಿಂದ ನಲುಗಿರುವ ಚೀನಾದ ಜನರಿಗೆ ನೆರವು ಒದಗಿಸಲು,15 ಟನ್‌ ವೈದ್ಯಕೀಯ ಸಲಕರಣೆಗಳನ್ನು ಹೊತ್ತ ಭಾರತೀಯ ವಾಯುಪಡೆಯ (ಐಎಎಫ್‌) ವಿಮಾನ ವುಹಾನ್‌ ತಲುಪಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ. ‘ಐಎಎಫ್‌ನ ವಿಮಾನ 80ಕ್ಕೂ ಹೆಚ್ಚು ಭಾರತೀಯರು ಹಾಗೂ ವಿವಿಧ ರಾಷ್ಟ್ರಗಳ 40 ಪ್ರಜೆಗಳನ್ನು ವುಹಾನ್‌ನಿಂದ ಸ್ಥಳಾಂತರಿಸಲಿದೆ’ ಎಂದು ಮೂಲಗಳು ಹೇಳಿವೆ.

ಚಿಕಿತ್ಸೆಗಾಗಿ ಅಧ್ಯಯನ

ಒಮಾಹಾ (ಎಪಿ): ‘ಕೋವಿಡ್–19ಕ್ಕೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ಸಲುವಾಗಿ ಅಮೆರಿಕದ ನೆಬ್ರಾಸ್ಕಾದಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಅಧ್ಯಯನ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದ 50 ಸ್ಥಳಗಳ 400 ರೋಗಿಗಳನ್ನು ಅಧ್ಯಯನಕ್ಕೊಳಪಡಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

‘ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ನೆರವು ನೀಡುವುದು ನಮ್ಮ ಉದ್ದೇಶ’ ಎಂದು ಅಧ್ಯಯನದ ನೇತೃತ್ವ ವಹಿಸಿಕೊಂಡಿರುವ ವೈದ್ಯ ಆ್ಯಂಡೆ ಕಲಿಲ್ ಹೇಳಿದ್ದಾರೆ. ಜಪಾನ್‌ನ ಹಡಗಿನಿಂದ ಸ್ಥಳಾಂತರಿಸಲಾದ 14 ಸೋಂಕಿತರು ನೆಬ್ರಾಸ್ಕಾದ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾದಿತಪ್ಪಿಸುವ ಪೋಸ್ಟ್‌ಗೆ ನಿಷೇಧ

ರಾಯಿಟರ್ಸ್‌ ವರದಿ: ಕೋವಿಡ್–19 ವೈರಸ್ ಸೋಂಕು ಕುರಿತು ಹಾದಿ ತಪ್ಪಿಸುವಂತಹ ಜಾಹೀರಾತುಗಳನ್ನು ನಿಷೇಧಿಸುವುದಾಗಿ ಫೇಸ್‌ಬುಕ್‌ ಸಂಸ್ಥೆ ಬುಧವಾರ ಘೋಷಿಸಿದೆ.ಸೋಂಕು ಕುರಿತ ಪೋಸ್ಟ್‌ವೊಂದನ್ನು ತೆಗೆದುಹಾಕುವುದಾಗಿ ಫೇಸ್‌ಬುಕ್ ಕಳೆದ ತಿಂಗಳು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.