ADVERTISEMENT

ಸೂಕ್ತ ವೇತನಕ್ಕೆ ಆಗ್ರಹ: ಬ್ರಿಟನ್‌ನಲ್ಲಿ ವೈದ್ಯರ ಮುಷ್ಕರ

ಏಜೆನ್ಸೀಸ್
Published 3 ಜನವರಿ 2024, 15:24 IST
Last Updated 3 ಜನವರಿ 2024, 15:24 IST
ಸೂಕ್ತ ವೇತನಕ್ಕೆ ಆಗ್ರಹಿಸಿ ಲಂಡನ್‌ನ ಥಾಮಸ್‌ ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸಿದ ಕಿರಿಯ ವೈದ್ಯರು (ಎಎಫ್‌ಪಿ)
ಸೂಕ್ತ ವೇತನಕ್ಕೆ ಆಗ್ರಹಿಸಿ ಲಂಡನ್‌ನ ಥಾಮಸ್‌ ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸಿದ ಕಿರಿಯ ವೈದ್ಯರು (ಎಎಫ್‌ಪಿ)   

ಲಂಡನ್‌: ಸೂಕ್ತ ವೇತನಕ್ಕೆ ಆಗ್ರಹಿಸಿ ಬ್ರಿಟನ್‌ನಲ್ಲಿ ಕಿರಿಯ ವೈದ್ಯರು ಆರು ದಿನಗಳ ಮುಷ್ಕರಕ್ಕೆ ಧುಮುಕಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಇದು ಅತ್ಯಂತ ದೀರ್ಘ ಮುಷ್ಕರ ಎನಿಸಿಕೊಂಡಿದ್ದು, ಸೇವೆಯಲ್ಲಿ ತೀವ್ರ ವ್ಯತ್ಯಯವಾಗಿದೆ.  

ಪ್ರತಿಭಟನೆಯ ಮೊದಲ ದಿನವಾದ ಬುಧವಾರ ಸಾವಿರಾರು ವೈದ್ಯರು ಕೆಲಸಕ್ಕೆ ಗೈರುಹಾಜರಾಗಿದ್ದರು. ಹೀಗಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಂಗಳವಾರದವರೆಗೆ ಮುಷ್ಕರ ನಡೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಿರಿಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದು, ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳು, ಗರ್ಭಿಣಿಯರು ಮತ್ತು ತುರ್ತು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ADVERTISEMENT

ಬ್ರಿಟನ್‌ನಲ್ಲಿ ದೈನದಿಂದ ಜೀವನ ವೆಚ್ಚ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ಬೆಲೆಗಳು ಏರುತ್ತಿರುವ ಪರಿಣಾಮ ತಮ್ಮ ವೇತನ ಹೆಚ್ಚಳ ಮಾಡುವಂತೆ ಆರೋಗ್ಯ ಸೇವೆಗಳ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಕಳೆದ ವರ್ಷವೂ ಹಲವು ಪ್ರತಿಭಟನೆಗಳಿಗೆ ಬ್ರಿಟನ್‌ ಸಾಕ್ಷಿಯಾಗಿತ್ತು. 

ನರ್ಸ್‌ಗಳು, ಅಂಬ್ಯುಲೆನ್ಸ್‌ ಸಿಬ್ಬಂದಿ ಮತ್ತು ಹಿರಿಯ ವೈದ್ಯರು ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಈಗಾಗಲೇ ಒಪ್ಪಂದವಾಗಿದೆ. ಆದರೆ, ಕಿರಿಯ ವೈದ್ಯರನ್ನು ಪ್ರತಿನಿಧಿಸುವ ಸಂಘಟನೆ ಮಾತ್ರ ಈ ವರೆಗೆ ಪರಿಹಾರ ಕಂಡುಕೊಂಡಿಲ್ಲ. ಜತೆಗೆ, ಸರ್ಕಾರ ಅವರೊಂದಿಗೆ ಮಾತುಕತೆ ನಡೆಸುವುದನ್ನು ನಿಲ್ಲಿಸಿದೆ. ವೈದ್ಯರು ಪ್ರತಿಭಟನೆ ನಿಲ್ಲಿಸುವ ವರೆಗೆ ಮಾತುಕತೆ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೆ, ಸೂಕ್ತ ವೇತನ ನೀಡದ ಹೊರತು ನಾವು ಮಾತುಕತೆಗೆ ಮುಂದಾಗುವುದಿಲ್ಲ ಎಂದು ಕಿರಿಯ ವೈದ್ಯರ ಸಂಘ ಪಟ್ಟು ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.