ADVERTISEMENT

ವಿಶ್ವಪ್ರಸಿದ್ಧ ಟಾಮ್ ಆ್ಯಂಡ್‌ ಜೆರ್ರಿ, ಪಾಪಾಯ್‌ ನಿರ್ದೇಶಕ ಡೀಚ್‌ ನಿಧನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 5:29 IST
Last Updated 21 ಏಪ್ರಿಲ್ 2020, 5:29 IST
ಜೀನ್‌ ಡೀಚ್‌  (ವಿಕಿಪೀಡಿಯಾ ಚಿತ್ರ)
ಜೀನ್‌ ಡೀಚ್‌ (ವಿಕಿಪೀಡಿಯಾ ಚಿತ್ರ)   

ವಿಶ್ವಪ್ರಸಿದ್ಧ ಟಾಮ್‌ ಆ್ಯಂಡ್‌ ಜೆರ್ರಿ ಮತ್ತು ಪಾಪಾಯ್‌ ಕಾರ್ಟೂನ್‌ಗಳ ನಿರ್ದೇಶಕ, ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಜೀನ್ ಡೀಚ್(95) ನಿಧನರಾಗಿದ್ದಾರೆ.

ಕಳೆದ ಗುರುವಾರವೇ ಅವರು ನಿಧನರಾಗಿದ್ದಾರೂ, ವಿಷಯ ತಡವಾಗಿ ಗೊತ್ತಾಗಿದೆ. ಡೀಚ್‌ ಅವರು ಜೆಕ್‌ ಗಣರಾಜ್ಯದ ಪೆರುಗ್ವೆಯ ಕ್ವಾರ್ಟರ್‌ ಎಂಬಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪ್ರಕಾಶನ ಸಂಸ್ಥೆ ಪೆಟ್ರ್ ಹಿಮ್ಮೆಲ್ ಸುದ್ದಿ ಸಂಸ್ಥೆ ‘ಎಪಿ’ಗೆ ತಿಳಿಸಿದೆ. ಆದರೆ, ಹೆಚ್ಚಿನ ಮಾಹಿತಿಯನ್ನು ನೀಡಲಾಗಿಲ್ಲ. ‌

ಏ.11ರಂದು ಡೀಚ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಕೊರೊನಾ ವೈರಸ್‌ ಕುರಿತು ಪೋಸ್ಟ್‌ವೊಂದನ್ನು ಹಾಕಿದ್ದರು. ಆದರೆ, ಡೀಚ್‌ಸಾವು ಅದರಿಂದ ಸಂಭವಿಸಿಲ್ಲ ಎಂದು ಅವರ ಕುಟುಂಬ ಹಾಗೂ ಆಪ್ತ ವಲಯ ಸ್ಪಷ್ಟಪಡಿಸಿದೆ.

ADVERTISEMENT

ಯುಜೀನ್ ಮೆರಿಲ್ ಡೀಚ್ ಎಂಬ ಪೂರ್ಣ ಹೆಸರಿನ ಜೀನ್‌ ಡೀಚ್‌ ಅವರು 1924ರಲ್ಲಿ ಜನಿಸಿದ್ದರು. 1960ರಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ‘ಮುನ್ರೋ’ ಸೇರಿದಂತೆ ಜಗತ್ತಿನ ಹಲವು ಪ್ರಸಿದ್ಧ ಕಾರ್ಟೂನ್‌ಗಳು ಡೀಚ್‌ ಅವರ ಹೆಸರಲ್ಲಿವೆ. ಇದೆಲ್ಲಕ್ಕೂ ಮಿಗಿಲಾಗಿ, ಜಗತ್ತಿನಾದ್ಯಂತ ಹಲವು ವಾಹಿನಿಗಳಲ್ಲಿ ಪ್ರೈಮ್‌ ಟೈಮ್‌ನಲ್ಲಿ ಪ್ರಸಾರವಾಗುತ್ತಿದ್ದ ಟಾಮ್‌ ಅ್ಯಂಡ್‌ ಜೆರ್ರಿ ಮತ್ತು ಪಾಪಾಯ್‌ ಕಾರ್ಟೂನ್‌ ಎಪಿಸೋಡ್‌ಗಳನ್ನು ನಿರ್ದೇಶಿಸಿದ್ದು ಇದೇ ಡೀಚ್‌.

ಕುತೂಹಲಕಾರಿ ಅಂಶವೆಂದರೆ, ಟಾಮ್ ಆ್ಯಂಡ್‌ ಜೆರ್ರಿ ಕಾರ್ಟೂನ್‌ ಹಿಂಸೆಯನ್ನು ಹೆಚ್ಚು ಪ್ರತಿಬಿಂಬಿಸುತ್ತವೆ ಎಂಬ ಪ್ರತಿಕ್ರಿಯೆಗಳು ಡೀಚ್‌ಗೆ ಆರಂಭದಲ್ಲಿ ಬಂದಿದ್ದವು. ಆದರೆ, ನಂತರದಲ್ಲಿ ಪ್ರೇಕ್ಷಕರು ಅದರಲ್ಲಿನ ಹಿಂಸಾತ್ಮಕ ಅಂಶಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಡೀಚ್‌ ಅವರ ಅನುಭವಕ್ಕೆ ಬಂದಿತ್ತು.

ಡೀಚ್‌ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರೂ ಕಲಾವಿದರು ಮತ್ತು ಕಾಮಿಕ್‌ ಬರಹಗಾರರಾಗಿರುವುದು ವಿಶೇಷ.

ಸಾಮಾಜಿಕ ಜಾಲತಾಣದಲ್ಲಿ ಸಂತಾಪ

ಜೀನ್‌ ಡೀಚ್‌ ಅವರ ನಿಧನಕ್ಕೆ ಇಡೀ ಜಗತ್ತು ಮಮ್ಮಲ ಮರುಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಂಖ್ಯಾತ ಮಂದಿ ಡೀಚ್‌ ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ. ಅಲ್ಲದೆ, ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.