ADVERTISEMENT

ಸಹೋದರನ ಪುತ್ರಿಯಿಂದ ಟ್ರಂಪ್ ಕುರಿತ ಪುಸ್ತಕ!

ಪುಸ್ತಕ ಬಿಡುಗಡೆ ತಡೆಗೆ ನ್ಯಾಯಾಲಯದ ಮೆಟ್ಟಿಲೇರಿದ ಟ್ರಂಪ್ ಕುಟುಂಬ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 8:31 IST
Last Updated 30 ಜೂನ್ 2020, 8:31 IST
ಟ್ರಂಪ್‌ ಕುರಿತಾದ ಪುಸ್ತಕ
ಟ್ರಂಪ್‌ ಕುರಿತಾದ ಪುಸ್ತಕ    

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಹಲವರು, ವಿವಿಧ ರೀತಿಯ ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಅದರಲ್ಲಿ ಕೆಲವರು ಅವರ ರಾಜಕೀಯದ ಒಳನೋಟ, ಏಳುಬೀಳುಗಳ ಬಗ್ಗೆ ಬೆಳಕು ಚೆಲ್ಲಿದರೆ, ಇನ್ನೂ ಕೆಲವರು ಅವರ ಅಧಿಕಾರದ ಅವಧಿಯ ಬಗ್ಗೆ ಬರೆಯುತ್ತಿದ್ದಾರೆ. ಈ ಪುಸ್ತಕ ಬಿಡುಗಡೆ ವಿಷಯ ಕುರಿತು ವಿಶ್ವದ ಪ್ರಮುಖ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಇತ್ತೀಚೆಗಷ್ಟೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಅವರು ಟ್ರಂಪ್‌ ಕುರಿತು ಬರೆದಿರುವ ‘ದ ರೂಮ್ ವೇರ್ ಇಟ್ ಹ್ಯಾಪನ್ಡ್: ಎ ವೈಟ್ ಹೌಸ್ ಮೆಮಾಯಿರ್‘ ಕೃತಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಈಗ ಹೊಸ ವಿಷಯ ಏನೆಂದರೆ, ಟ್ರಂಪ್‌ ಅವರ ಅಣ್ಣನ ಪುತ್ರಿ ಮೇರಿ ಎಲ್. ಟ್ರಂಪ್‌, ತನ್ನ ಚಿಕ್ಕಪ್ಪಂದಿರಾದ ಡೊನಾಲ್ಡ್‌ ಟ್ರಂಪ್ ಮತ್ತು ರಾಬರ್ಟ್‌ ಟ್ರಂಪ್‌ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದಾರೆ. ಆ ಕೃತಿಯ ಹೆಸರು 'ಟೂ ಮಚ್ ಅಂಡ್ ನೆವರ್ ಎನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್‌ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್'. ಈ ಪುಸ್ತಕ ಮುಂದಿನ ದಿನಗಳು ಬಿಡುಗಡೆಯಾಗಲಿದೆ.

ಈ ಸಹೋದರರ ಜತೆಗೆ ತನ್ನ ತಂದೆ ಫ್ರೆಡ್ ಜೂನಿಯರ್ ಅವರುಹೊಂದಿದ್ದ ವೈರತ್ವದಂತಹ ಸ್ಫೋಟಕ ಮಾಹಿತಿಗಳು, ಸಹೋದರರ ನಡುವಿನ ವ್ಯವಹಾರ ಕುರಿತ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರಂತೆ. ಅಷ್ಟೇ ಅಲ್ಲ, ಫ್ರೆಡ್ಕುಡಿತದ ದಾಸರಾಗಿ ಹೇಗೆ ದುರಂತದ ಸಾವನ್ನು ಕಂಡರು ಎಂಬ ಮನಕಲಕುವ ಮಾಹಿತಿಗಳೂ ಆ ಕೃತಿಯಲ್ಲಿವೆಯಂತೆ.

ADVERTISEMENT

ಇದರ ಜತೆಗೆ,ತನಗೆ ಬರಬೇಕಾಗಿದ್ದ ಪಿತ್ರಾರ್ಜಿತ ಆಸ್ತಿಗಾಗಿ ಚಿಕ್ಕಪ್ಪಂದಿರು ಹೇಗೆ ತನ್ನನ್ನು ಸತಾಯಿಸಿದರು. ಅಂತಿಮವಾಗಿ ಆಸ್ತಿ ವ್ಯಾಜ್ಯವು ಹೇಗೆ ನ್ಯಾಯಾಲಯದ ಮೆಟ್ಟಿಲೇರಿತು. ಈ ವಿಚಾರವಾಗಿ ಅವರು ತನ್ನನ್ನು ಹೇಗೆಲ್ಲ ಅವಮಾನಿಸಿದರು ಎಂಬ ಬಗ್ಗೆಯೂ 55 ವರ್ಷದ ಮೇರಿ ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರಂತೆ.

ತಂದೆಫ್ರೆಡ್ ಜೂನಿಯರ್ ಅತಿ ಕುಡಿತದ ಕಾರಣದಿಂದಾಗಿ ಮೃತಪಟ್ಟಾಗ ಮೇರಿಗೆ 16 ವರ್ಷ ವಯಸ್ಸು.ಫ್ರೆಡ್ ಜೂನಿಯರ್, ಫ್ರೆಡ್ ಸೀನಿಯರ್‌ರ ಹಿರಿಯ ಮಗ. ಫ್ರೆಡ್ ಜೂನಿಯರ್ ನಂತರ ಹುಟ್ಟಿದವರು ಡೊನಾಲ್ಡ್ ಟ್ರಂಪ್ ಮತ್ತು ರಾಬರ್ಟ್ ಟ್ರಂಪ್.

ಈ ಪುಸ್ತಕದಲ್ಲಿ ಕುಟುಂಬದ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಡೊನಾಲ್ಡ್‌ ಟ್ರಂಪ್‌ ಕುಟುಂಬದವರು ಮೇರಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈಗ ಪುಸ್ತಕದಲ್ಲಿಒಪ್ಪಂದಕ್ಕೆ ವಿರುದ್ಧವಾದ ಅಂಶಗಳು ಇವೆ.ಹಾಗಾಗಿ ಆ ಕುಟುಂಬದ ಸದಸ್ಯರುಈ ಪುಸ್ತಕದ ಬಿಡುಗಡೆಗೆ ತಡೆ ತರಲು ಪ್ರಯತ್ನಿಸುತ್ತಿದ್ದು, ಈ ಸಂಬಂಧಟ್ರಂಪ್ ಸಹೋದರರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.