ADVERTISEMENT

ಸಿಎಎ ರದ್ದತಿಗೆ ಒತ್ತಡ ಹೇರಿ: ಅಮೆರಿಕದ ಹಿರಿಯ ಸೆನೆಟರ್‌ ಆಗ್ರಹ

ಪಿಟಿಐ
Published 16 ಜನವರಿ 2020, 2:21 IST
Last Updated 16 ಜನವರಿ 2020, 2:21 IST
ಬಾಬ್‌ ಮೆನೆನ್‌ಡಿಜ್‌ 
ಬಾಬ್‌ ಮೆನೆನ್‌ಡಿಜ್‌    

ವಾಷಿಂಗ್ಟನ್‌ : ಭಾರತದಲ್ಲಿರುವ ಎಲ್ಲ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ರದ್ದುಗೊಳಿಸಲು ಅಮೆರಿಕದ ಹಿರಿಯ ಸೆನೆಟರ್‌ ಆಗ್ರಹಿಸಿದ್ದಾರೆ.

ಈ ಕುರಿತುಭಾರತ ಸರ್ಕಾರಕ್ಕೆ ಒತ್ತಡ ಹೇರುವಂತೆಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರಿಗೆ ಸೆನೆಟರ್‌ ಬಾಬ್‌ ಮೆನೆಂಡಿಜ್‌ ಪತ್ರ ಬರೆದಿದ್ದಾರೆ.

ಭಾರತೀಯ ಸಂಜಾತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ನ್ಯೂಜೆರ್ಸಿಯನ್ನು ಪ್ರತಿನಿಧಿಸುತ್ತಿರುವ ಬಾಬ್‌,ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದ ಸಂಸದರ ಪ್ರಮುಖವಾದ ಸಮಿತಿಯ ಸದಸ್ಯರೂ ಆಗಿದ್ದಾರೆ.‘ಭಾರತದ ಸಂವಿಧಾನವು ಎಲ್ಲರಿಗೂ ಸಮಾನತೆಯ ಹಕ್ಕು ನೀಡಿದೆ. ಹೀಗಿರುವಾಗ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಕಾನೂನು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಭಾರತದಲ್ಲಿರುವ ಎಲ್ಲ ಧರ್ಮದ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆಗೆ ಆಡಳಿತವು ಮುಂದಾಗಬೇಕು’ ಎಂದು ಬಾಬ್‌ ಪತ್ರದಲ್ಲಿಉಲ್ಲೇಖಿಸಿದ್ದಾರೆ.

ADVERTISEMENT

ಮುಸ್ಲಿಮರ ಮೇಲೆ ಪರಿಣಾಮ

‘ಎನ್‌ಆರ್‌ಸಿಯಿಂದ ಈಗಾಗಲೇ ಭಾರತದಲ್ಲಿರುವ ಮುಸ್ಲಿಮರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಜಾತ್ಯತೀತತೆಗೆ ಕೇಡು ಉಂಟುಮಾಡುತ್ತಿದೆ. ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಆಶ್ರಯ ಅರಸಿ ಬಂದವರಿಗೆ ಪೌರತ್ವ ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಆದರೆ ಪಾಕಿಸ್ತಾನದಲ್ಲಿರುವ ಅಹಮ್ಮದೀಯರನ್ನು ಹಾಗೂ ಬರ್ಮಾದ ರೊಹಿಂಗ್ಯಾ ಮುಸ್ಲಿಮರನ್ನು ಸೇರ್ಪಡೆಗೊಳಿಸದೇ ಇರುವುದು ಸರ್ಕಾರದ ಉದ್ದೇಶವನ್ನು ಸಂಕೇತಿಸುತ್ತದೆ’ ಎಂದಿದ್ದಾರೆ.

ಪತ್ರದಲ್ಲಿ ಕಾಶ್ಮೀರದ ಪರಿಸ್ಥಿತಿ ಕುರಿತೂ ಉಲ್ಲೇಖಿಸಲಾಗಿದೆ. ‘ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಕಾಶ್ಮೀರದ ಪರಿಸ್ಥಿತಿ ತಿಳಿಗೊಂಡಿಲ್ಲ. ಐದು ತಿಂಗಳು ಇಂಟರ್‌ನೆಟ್‌ ಸ್ಥಗಿತಗೊಳಿಸಿರುವುದು ಪ್ರಜಾಪ್ರಭುತ್ವ ರಾಷ್ಟ್ರಗಳ ಇತಿಹಾಸದಲ್ಲೇ ಇದೇ ಮೊದಲು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.