ADVERTISEMENT

ಪೂರ್ವ ಏಷ್ಯಾದಲ್ಲಿ ಸಾಮರಸ್ಯದ ಹೊಸ ಯುಗ ಆರಂಭಕ್ಕೆ ಟ್ರಂಪ್‌ ಕರೆ

ಹಳೆ ದ್ವೇಷ, ಹಗೆತನ ಮರೆಯಿರಿ. ಗಾಜಾ ಭವಿಷ್ಯ ಕುರಿತ ಶೃಂಗದಲ್ಲಿ ಅಮೆರಿಕ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 13:46 IST
Last Updated 14 ಅಕ್ಟೋಬರ್ 2025, 13:46 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ಶರ್ಮ್‌ ಎಲ್‌ ಶೇಖ್‌ (ಈಜಿಪ್ಟ್‌): ಪೂರ್ವ ಏಷ್ಯಾದಲ್ಲಿ ಸಾಮರಸ್ಯದ ಹೊಸ ಯುಗದ ಆರಂಭಕ್ಕೆ ಕರೆ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಹಳೆಯ ದ್ವೇಷ ಮತ್ತು ಹಗೆತನ ಬಿಡುವುದಕ್ಕೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಮಂಗಳವಾರ ಆಗ್ರಹಿಸಿದರು.

ಹಮಾಸ್‌–ಇಸ್ರೇಲ್‌ ನಡುವಿನ ಸಂಘರ್ಷ ಶಮನಗೊಳಿಸಲು ತನ್ನ ಮಧ್ಯಸ್ಥಿಕೆಯಲ್ಲಿ ಸಿದ್ಧವಾದ ಕದನ ವಿರಾಮ ಸೂತ್ರ ಫಲಪ್ರದವಾದ ಬೆನ್ನಲ್ಲೇ, ಪೂರ್ವ ಏಷ್ಯಾದಲ್ಲಿ ಶಾಂತಿ ಸುಧಾರಣೆಯ ಭಾಗವಾಗಿ ಗಾಜಾ ಭವಿಷ್ಯ ಕುರಿತು ನಡೆದ ಜಾಗತಿಕ ಶೃಂಗದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

‘ಹಿಂದಿನ ಕಹಿ ಮತ್ತು ದ್ವೇಷವನ್ನು ಬಿಡಲು ಜೀವಿತಾವಧಿಯಲ್ಲಿ ಒಮ್ಮೆ ಅವಕಾಶ ಸಿಕ್ಕಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ಭವಿಷ್ಯದ ಪೀಳಿಗೆಯವರು ಹೋರಾಟಗಳಲ್ಲಿ ಸಿಲುಕುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ನಾಯಕರು ತಮ್ಮ ಬದ್ಧತೆ ವ್ಯಕ್ತಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಸಂಘರ್ಷವನ್ನು ನಿಲ್ಲಿಸಿದ್ದೇವೆ’:

‘ಈ ಸಂಘರ್ಷ ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಹುತೇಕರು ಜರಿದಿದ್ದರು. ಆದರೆ ಅದೀಗ ಸಾಧ್ಯವಾಗಿದೆ. ನಮ್ಮೆಲ್ಲರ ಕಣ್ಣ ಮುಂದೆಯೇ ಅದು ಸಾಧ್ಯವಾಗಿದೆ’ ಎಂದು ಅವರು ಹೇಳಿದರು. ಈ ವೇಳೆ ಅವರ ಪಕ್ಕದಲ್ಲಿ ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌–ಸಿಸಿ ಇದ್ದರು. 

ಯುರೋಪ್‌ ಮತ್ತು ಪೂರ್ವ ಏಷ್ಯಾದ ಕೆಲ ದೇಶಗಳ ಪ್ರತಿನಿಧಿಗಳು ಸೇರಿದಂತೆ ಮೂರು ಡಜನ್‌ಗೂ ಹೆಚ್ಚು ದೇಶಗಳ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗೈರಾಗಿದ್ದರು. ಅವರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಯಹೂದಿಗಳ ಧಾರ್ಮಿಕ, ಸಾಂಸ್ಕೃತಿಕ ಉತ್ಸವದ ಕಾರಣ ಹಾಜರಾಗಲು ಆಗುವುದಿಲ್ಲ ಎಂದು ಅವರ ಕಚೇರಿ ಮಾಹಿತಿ ನೀಡಿತ್ತು ಎಂದು ಮೂಲಗಳು ತಿಳಿಸಿವೆ. 

ಸಹಿ ಹಾಕಿದ ನಾಯಕರು:

ಗಾಜಾದ ಭವಿಷ್ಯಕ್ಕೆ ಅಡಿಪಾಯ ಹಾಕುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿಶಾಲ ದೃಷ್ಟಿಕೋನವನ್ನು ವಿವರಿಸುವ ದಾಖಲೆಗೆ ಟ್ರಂಪ್‌, ಎಲ್‌–ಸಿಸಿ, ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌, ಕತಾರ್‌ ದೊರೆ ತಮೀಮ್ ಬಿನ್ ಹಮದ್‌ ಅಲ್‌ ಥಾನಿ ಸಹಿ ಹಾಕಿದರು. 

ಹಿಂದಿನ ದಿನವಾದ ಸೋಮವಾರ ಟ್ರಂಪ್‌, ಇಸ್ರೇಲ್‌ಗೆ ಭೇಟಿ ನೀಡಿದ್ದರು. ಕದನ ವಿರಾಮ ಸೂತ್ರ ಫಲಪ್ರದವಾದ ಸಂಭ್ರಮದಲ್ಲಿ ಅವರು ಭಾಗಿಯಾದರು. ಇಸ್ರೇಲ್‌ ಸದನದಲ್ಲೂ ಅವರು ಮಾತನಾಡಿದರು. 

ಇಸ್ರೇಲ್ ಸದನದಲ್ಲಿ ತಮಗೆ ದೊರೆತ ಭವ್ಯ ಸ್ವಾಗತದಿಂದ ಸಂತಸಗೊಂಡ ಟ್ರಂಪ್, ‘ನೀವು ಗೆದ್ದಿದ್ದೀರಿ, ಉಗ್ರರ ವಿರುದ್ಧದ ವಿಜಯದ ಈ ಸಂದರ್ಭವನ್ನು ಪೂರ್ವ ಏಷ್ಯಾದಲ್ಲಿ ಶಾಂತಿ ಮತ್ತು ಸಮೃದ್ಧಿಯ ಸಾಧನವಾಗಿ ಪರಿವರ್ತಿಸಿಕೊಳ್ಳಬೇಕು’ ಎಂದರು. ಇದೇ ವೇಳೆ ಅವರು,  ‘ಭಯೋತ್ಪಾದನೆ ಮತ್ತು ಹಿಂಸೆಯ ಮಾರ್ಗದಿಂದ ಶಾಶ್ವತವಾಗಿ ಹಿಂದೆ ಸರಿಯುವಂತೆ ಪ್ಯಾಲೆಸ್ಟೀನಿಯರಿಗೂ’ ಕರೆ ನೀಡಿದರು.

ಟ್ರಂಪ್ ಅವರನ್ನು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಕೊಂಡಾಡಿದರು. ‘ಇಸ್ರೇಲ್‌ ಹಿಂದೆಂದೂ ಕಂಡಿರದ ಶ್ವೇತಭವನದ ದೊಡ್ಡ ಸ್ನೇಹಿತ’ ಎಂದು ಅವರು ಅಮೆರಿಕ ಅಧ್ಯಕ್ಷರನ್ನು ಬಣ್ಣಿಸಿದರು. ಈ ವೇಳೆ ‘ಟ್ರಂಪ್‌, ದಿ ಪೀಸ್ ಪ್ರೆಸಿಡೆಂಟ್‌’ ಎಂಬ ಘೋಷಣೆಗಳೂ ಮೊಳಗಿದವು. 

ಗಾಜಾದ ಪುನರ್‌ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿಯೂ ಟ್ರಂಪ್‌ ಭರವಸೆ ನೀಡಿದರು. ಅಲ್ಲದೆ, ಇದೇ ವೇಳೆ ಅವರು ಇರಾನ್‌ಗಾಗಿ ಅಮೆರಿಕದ ಸಹಾಯಹಸ್ತ ಸದಾ ಲಭ್ಯವಿರುತ್ತದೆ ಎಂದು ಹೇಳಿದರು. 

ಶಾಂತಿ ಸ್ಥಾಪನೆಗೆ ಕೊನೆಯ ಅವಕಾಶ: ಈಜಿಪ್ಟ್‌ ಶರ್ಮ್‌ ಎಲ್‌ ಶೇಖ್‌ (ಎಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮುಂದಿಟ್ಟಿರುವ ಪ್ರಸ್ತಾವನೆಯು ಪೂರ್ವ ಏಷ್ಯಾ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಕೊನೆಯ ಅವಕಾಶವಾಗಿದೆ ಎಂದು ಹೇಳಿದ ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌–ಸಿಸಿ ತಮ್ಮ ಎರಡು ದೇಶಗಳ ಪರಿಹಾರ ಸೂತ್ರವನ್ನು ಮತ್ತೆ ಪ್ರತಿಪಾದಿಸಿದರು. ಪ್ಯಾಲೆಸ್ಟೀನಿಯರು ತಮ್ಮದೇ ಆದ ಸ್ವತಂತ್ರ ದೇಶ ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಶೃಂಗಸಭೆಯಲ್ಲಿ ಸಹ ಅಧ್ಯಕ್ಷರಾಗಿ ಮಾತನಾಡಿದ ಅವರು ‘ಟ್ರಂಪ್‌ ಅವರ ಪ್ರಯತ್ನ ಮತ್ತು ದೃಷ್ಟಿಕೋನದಿಂದ ಶಾಂತಿ ಸಾಧ್ಯವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.