ADVERTISEMENT

ಅಮೆರಿಕ– ಚೀನಾ ಸುಂಕ ಸಮರ

ಡೊನಾಲ್ಡ್‌ ಟ್ರಂಪ್‌ ಆದೇಶಕ್ಕೆ ತಕ್ಷಣವೇ ತಿರುಗೇಟು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 18:09 IST
Last Updated 18 ಸೆಪ್ಟೆಂಬರ್ 2018, 18:09 IST
ಟ್ರಂಪ್
ಟ್ರಂಪ್   

ವಾಷಿಂಗ್ಟನ್ (ಪಿಟಿಐ): ಚೀನಾದಿಂದ ಆಮದಾಗುವ ₹14.4 ಲಕ್ಷ ಕೋಟಿ ಮೌಲ್ಯದ ಸರಕಿನ ಮೇಲೆ ಹೊಸದಾಗಿ ಶೇ 10ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೋಮವಾರ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕದಿಂದ ತಮ್ಮ ದೇಶಕ್ಕೆ ಆಮದಾಗುವ ₹4.32 ಲಕ್ಷ ಕೋಟಿ ಮೌಲ್ಯದ ಸರಕಿನ ಮೇಲೆ ತಾನು ಸಹ ಸುಂಕ ವಿಧಿಸುವುದಾಗಿ ಹೇಳುವ ಮೂಲಕ ಚೀನಾ ತಿರುಗೇಟು ನೀಡಿದೆ.

ಇದರಿಂದ, ಎರಡೂ ದೇಶಗಳ ನಡುವಿನ ವ್ಯಾಪಾರ ಸಮರ ಮತ್ತಷ್ಟು ಉಲ್ಬಣಿಸಿದೆ.

ಕಾನೂನುಬಾಹಿರ ವ್ಯಾಪಾರ ಕ್ರಮಗಳನ್ನು ಬದಲಾಯಿಸಿಕೊಳ್ಳಲು ಚೀನಾ ಮುಂದಾಗುತ್ತಿಲ್ಲ ಎಂದು ಟ್ರಂಪ್‌ ಅರೋಪಿಸಿದ್ದಾರೆ. ಅಮೆರಿಕ ವಿಧಿಸುವ ಹೊಸ ಸುಂಕ ಇದೇ 24ರಿಂದ ಜಾರಿಗೆ ಬರಲಿದೆ. ಈ ವರ್ಷಾಂತ್ಯದ ವೇಳೆಗೆ ಸುಂಕದ ಪ್ರಮಾಣ ಶೇ 25ಕ್ಕೆ ಏರಿಕೆಯಾಗಲಿದೆ.

ADVERTISEMENT

‘ನಮ್ಮ ರೈತರ ಇಲ್ಲವೇ ಕೈಗಾರಿಕೆಗಳ ವಿರುದ್ಧ ಚೀನಾ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ನಾವು ಮೂರನೇ ಹಂತದ ಸುಂಕ ವಿಧಿಸುತ್ತೇವೆ’ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

‘ಚೀನಾ ಅಕ್ರಮ ವ್ಯಾಪಾರ ಕ್ರಮಗಳನ್ನು ಅನುಸರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಹೊಸದಾಗಿ ಸುಂಕ ವಿಧಿಸಲಾಗುವುದು’ ಎಂದು ಟ್ರಂಪ್‌ ಜೂನ್‌ 15ರಂದೇ ಘೋಷಣೆ ಮಾಡಿದ್ದರು.

ಜಾಗತಿಕ ಮುಕ್ತ ಆರ್ಥಿಕ ಪದ್ಧತಿಯಲ್ಲಿನ ನ್ಯಾಯಸಮ್ಮತ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ, ಅಮೆರಿಕ ವಿಧಿಸುವ ಸುಂಕಕ್ಕೆ ಪ್ರತಿಯಾಗಿ ನಾವೂ ಸುಂಕ ಹೇರುವುದು ಅನಿವಾರ್ಯ’ ಎಂದು ಚೀನಾ ವಾಣಿಜ್ಯ ಸಚಿವಾಲಯ ಹೇಳಿದೆ. ಇದೇ ವೇಳೆ ಅಮೆರಿಕದ ಕ್ರಮಕ್ಕೆ ಅದು ವಿಷಾದ ವ್ಯಕ್ತಪಡಿಸಿದೆ.

ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಆ ದೇಶದ ಪ್ರಜೆಗಳಿಗೆ ವೀಸಾ ನಿರ್ಬಂಧ ಹೇರಲಾಗುವುದೇ ಎಂಬುದಕ್ಕೆ ಸ್ಪಷ್ಟನೆ ನೀಡಲು ವಿದೇಶಾಂಗ ವ್ಯವಹಾರ ಇಲಾಖೆ ನಿರಾಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.