ADVERTISEMENT

ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ನಿರ್ಬಂಧ ಹೇರಿದ ಟ್ರಂಪ್

ಪಿಟಿಐ
Published 23 ಅಕ್ಟೋಬರ್ 2025, 4:32 IST
Last Updated 23 ಅಕ್ಟೋಬರ್ 2025, 4:32 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ‍ಫೇಸ್‌ಬುಕ್ ಚಿತ್ರ

ವಾಷಿಂಗ್ಟನ್: ಉಕ್ರೇನ್ ಜೊತೆಗಿನ ಯುದ್ಧ ವಿರಾಮ ಮಾತುಕತೆ ಕುರಿತಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲಿನ ಹತಾಶೆ ಹೆಚ್ಚುತ್ತಿದ್ದಂತೆ ರಷ್ಯಾದ ಎರಡು ತೈಲ ಕಂಪನಿಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿದ್ದಾರೆ

ADVERTISEMENT

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಮ್ಮ ಎರಡನೇ ಅವಧಿಯಲ್ಲಿ ಮೊದಲ ಬಾರಿಗೆ ರಷ್ಯಾದ ಮೇಲೆ ಹೊಸ ಮಹತ್ವದ ನಿರ್ಬಂಧಗಳನ್ನು ವಿಧಿಸುತ್ತಿರುವುದಾಗಿ ಘೋಷಿಸಿದ್ದಾರೆ. ಉಕ್ರೇನ್ ಜೊತೆಗಿನ ಯುದ್ಧ ವಿರಾಮದ ಬಗ್ಗೆ ಚರ್ಚಿಸಲು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಉಭಯ ನಾಯಕರ ಭೇಟಿಯ ಯೋಜನೆ ಮುರಿದುಬಿದ್ದ ನಂತರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲಿನ ದೊಡ್ಡ ಮಟ್ಟದ ಹತಾಶೆಯನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನ ಪರವಾಗಿ ನಿಲ್ಲಲು ಅಮೆರಿಕ ಅಧ್ಯಕ್ಷ ಟ್ರಪ್ ಅವರನ್ನು ಒತ್ತಾಯಿಸಲು ಯುರೋಪಿಯನ್ ನಾಯಕರ ಒಕ್ಕೂಟದ ಪರವಾಗಿ ವಾಷಿಂಗ್ಟನ್‌ಗೆ ಬಂದಿದ್ದ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ಓವಲ್ ಕಚೇರಿಯಲ್ಲಿ ಮಾತುಕತೆ ನಡೆಸುವಾಗಲೇ ಟ್ರಂಪ್ ಆದೇಶ ಹೊರಬಿದ್ದಿದೆ,

ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಅನ್ನು ಗುರಿಯಾಗಿರಿಸಿಕೊಂಡು ಈ ನಿರ್ಬಂಧ ಹೇರಲಾಗಿದೆ.

ಈಗ ಹತ್ಯೆಯನ್ನು ನಿಲ್ಲಿಸಲು ಮತ್ತು ಕದನ ವಿರಾಮಕ್ಕೆ ಸಮಯ ಎಂದು ಅಮೆರಿಕ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಎರಡೂ ತೈಲ ಕಂಪನಿಗಳನ್ನು ಕ್ರೆಮ್ಲಿನ್‌ನ ಯುದ್ಧ ಯಂತ್ರದ ಅವಳಿ ಎಂಜಿನ್‌ಗಳೆಂದು ವಿವರಿಸಿದ್ದಾರೆ.

'ನಾನು ವ್ಲಾಡಿಮಿರ್ ಜೊತೆ ಮಾತನಾಡುವ ಪ್ರತಿ ಬಾರಿಯೂ ಉತ್ತಮ ಸಂಭಾಷಣೆಗಳನ್ನು ನಡೆಸುತ್ತೇನೆ. ಆದರೆ, ನಂತರ ಅವರು ಮುಂದುವರಿಯುವುದೇ ಇಲ್ಲ’ ಎಣದು ಟ್ರಂಪ್ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಇಂಧನ ಕ್ಷೇತ್ರದ ವಿರುದ್ಧ ಅಮೆರಿಕ ತೆಗೆದುಕೊಂಡಿರುವ ಅತ್ಯಂತ ಮಹತ್ವದ ಕ್ರಮಗಳಲ್ಲಿ ಈ ನಿರ್ಬಂಧಗಳು ಸೇರಿವೆ. ಅಮೆರಿಕದ ಮಿತ್ರರಾಷ್ಟ್ರಗಳು ರಷ್ಯಾದ ತೈಲವನ್ನು ಕಾನೂನುಬದ್ಧವಾಗಿ ಖರೀದಿಸಲು ಅವಕಾಶ ನೀಡಲು ಈ ಹಿಂದಿನ ಬೈಡನ್ ಆಡಳಿತವು ಕಂಪನಿಗಳ ವಿರುದ್ಧ ನಿರ್ಬಂಧ ವಿಧಿಸುವುದನ್ನು ತಪ್ಪಿಸಿತ್ತು. ಇದೀಗ, ಕಂಪನಿಗಳನ್ನು ಗುರಿಯಾಗಿಸಿಕೊಂಡು ನಿರ್ಬಂಧ ವಿಧಿಸಿರುವುದು ರಷ್ಯಾದ ತೈಲ ಆದಾಯಕ್ಕೆ ದೊಡ್ಡ ಹೊಡೆತವನ್ನುನೀಡಿದಂತಾಗಿದೆ ಎಂದು ವರದಿ ತಿಳಿಸಿದೆ.

‘ಈ ನಿರ್ಬಂಧಗಳು ಒಂದು ದೊಡ್ಡ ಹೆಜ್ಜೆಯಾಗಿದೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ಹೇರಬೇಕು’ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ನೋಡಿ, ಇವು ಅಗಾಧ ನಿರ್ಬಂಧಗಳು’ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಹೇಳಿದ್ದಾರೆ. ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳ ವಿರುದ್ಧ ದೊಡ್ಡ ನಿರ್ಬಂಧ ವಿಧಿಸಲಾಗಿದೆ. ಇನ್ನು ಅವು ಹೆಚ್ಚು ಕಾಲ ಉಳಿಯುವುದಿಲ್ಲ. ಯುದ್ಧವು ಇತ್ಯರ್ಥವಾಗುತ್ತದೆ ಎಂದು ನಾವು ಭಾವಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.