ADVERTISEMENT

ಅಮೆರಿಕಕ್ಕೆ ಒಳಿತಾಗುವುದರತ್ತ ಗಮನ: ಶಾಂತಿ ಬಗ್ಗೆ ಮಾತ್ರ ಯೋಚಿಸುವುದಿಲ್ಲ; ಟ್ರಂಪ್

ಏಜೆನ್ಸೀಸ್
Published 19 ಜನವರಿ 2026, 15:37 IST
Last Updated 19 ಜನವರಿ 2026, 15:37 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ಓಸ್ಲೊ: ನೊಬೆಲ್‌ ಶಾಂತಿ ಪ್ರಶಸ್ತಿ ಗೆಲ್ಲಲು ವಿಫಲನಾಗಿರುವುದರಿಂದ ತಾನು ಇನ್ನು ಮುಂದೆ ‘ಶಾಂತಿಯ ಬಗ್ಗೆ ಮಾತ್ರ ಯೋಚಿಸುವ’ ಅಗತ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಾರ್ವೆ ಪ್ರಧಾನಿಗೆ ತಿಳಿಸಿದ್ದಾರೆ.

‘ಎಂಟಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ್ದರೂ ನಿಮ್ಮ ದೇಶವು ನನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದಿರಲು ನಿರ್ಧರಿಸಿದೆ. ನಾನು ಇನ್ನು ಮುಂದೆ ಶಾಂತಿಯ ಬಗ್ಗೆ ಮಾತ್ರ ಯೋಚಿಸುವ ಜವಾಬ್ದಾರಿಯನ್ನು ಹೊರುವುದಿಲ್ಲ’ ಎಂದು ಟ್ರಂಪ್ ಅವರು ನಾರ್ವೆ ಪ್ರಧಾನಿ ಯೋನಸ್‌ ಗಾರ್‌ ಸ್ತೋರ್ ಅವರಿಗೆ ಸೋಮವಾರ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.

‘ಜಗತ್ತಿನಲ್ಲಿ ಶಾಂತಿ ನೆಲಸಬೇಕು ಎಂಬುದು ನನಗೆ ಆದ್ಯತೆಯಾಗಿದ್ದರೂ, ಯಾವುದರಿಂದ ಅಮೆರಿಕಕ್ಕೆ ಒಳಿತಾಗುವುದೋ ಅದರತ್ತ ಹೆಚ್ಚು ಗಮನಹರಿಸುತ್ತೇನೆ’ ಎಂದಿದ್ದಾರೆ. 

ADVERTISEMENT

ಎಂಟು ಯುದ್ಧಗಳನ್ನು ನಿಲ್ಲಿಸಿರುವ ಕಾರಣ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ತನಗೇ ನೀಡಬೇಕು ಎಂದು ಟ್ರಂಪ್‌ ಕಳೆದ ವರ್ಷ ಹಲವು ಸಲ ಹೇಳಿದ್ದರು. ಆದರೆ ಪ್ರಶಸ್ತಿಯು ವೆನೆಜುವೆಲಾದ ವಿರೋಧ‍ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರ ಪಾಲಾಗಿತ್ತು. ಮಚಾದೊ ಅವರು ತಮಗೆ ದೊರಕಿದ್ದ ನೊಬೆಲ್ ಶಾಂತಿ ಪುರಸ್ಕಾರವನ್ನು ಈಚೆಗೆ ಟ್ರಂಪ್ ಅವರಿಗೆ ಸಮರ್ಪಿಸಿದ್ದಾರೆ.

ಗ್ರೀನ್‌ಲ್ಯಾಂಡ್‌ ವಶ–ಪುನರುಚ್ಚಾರ: ವಿಶ್ವದ ಶಾಂತಿಯ ಹಿತದೃಷ್ಟಿಯಿಂದ ಸ್ವಾಯತ್ತ ಗ್ರೀನ್‌ಲ್ಯಾಂಡ್‌ ಅನ್ನು ಅಮೆರಿಕವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಬಯಕೆಯನ್ನು ಟ್ರಂಪ್ ಅವರು ಪುನರುಚ್ಚರಿಸಿದರು.

‘ಗ್ರೀನ್‌ಲ್ಯಾಂಡ್‌ ಪ್ರದೇಶವು ರಷ್ಯಾ ಅಥವಾ ಚೀನಾದ ಕೈವಶವಾಗುವುದನ್ನು ತಪ್ಪಿಸಲು ಡೆನ್ಮಾರ್ಕ್‌ಗೆ ಸಾಧ್ಯವಿಲ್ಲ. ಗ್ರೀನ್‌ಲ್ಯಾಂಡ್‌ ಮೇಲೆ ನಾವು ಸಂಪೂರ್ಣ ನಿಯಂತ್ರಣ ಸಾಧಿಸುವವರೆಗೂ ಜಗತ್ತು ಸುರಕ್ಷಿತವಾಗಿರುವುದಿಲ್ಲ’ ಎಂದು ಹೇಳಿದ್ದಾರೆ.

Cut-off box - ‘ನಾರ್ವೆ ಸರ್ಕಾರ ನೀಡಿಲ್ಲ’ ಟ್ರಂಪ್‌ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ನಾರ್ವೆ ಪ್ರಧಾನಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೆ ಸರ್ಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ‘ನೊಬೆಲ್ ಪ್ರಶಸ್ತಿ ವಿಜೇತರನ್ನು ಸ್ವತಂತ್ರ ನೊಬೆಲ್‌ ಸಮಿತಿಯು ಆಯ್ಕೆ ಮಾಡುತ್ತದೆ ಎಂಬುದನ್ನು ಟ್ರಂಪ್‌ ಒಳಗೊಂಡಂತೆ ಎಲ್ಲರಿಗೂ ಸ್ಪಷ್ಟವಾಗಿ ಹೇಳುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.