ADVERTISEMENT

ಇರಾನ್ ಜೊತೆ ರಾಜತಾಂತ್ರಿಕತೆಗೆ ಟ್ರಂಪ್ ಈಗಲೂ ಆಸಕ್ತಿ ಹೊಂದಿದ್ದಾರೆ: ಶ್ವೇತಭವನ

ಪಿಟಿಐ
Published 23 ಜೂನ್ 2025, 14:14 IST
Last Updated 23 ಜೂನ್ 2025, 14:14 IST
   

ವಾಷಿಂಗ್ಟನ್: ಪರಮಾಣು ಯೋಜನೆಯ ಕುರಿತು ಮಾತುಕತೆ ನಡೆಸಲು ನಿರಾಕರಿಸಿದರೆ, ಇರಾನಿನ ಜನರು ಅಲ್ಲಿನ ಸರ್ಕಾರವನ್ನು ಉರುಳಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಭಾವಿಸುತ್ತಾರೆ. ಆದರೆ, ಅಮೆರಿಕದ ಅಧ್ಯಕ್ಷರು ಇರಾನ್ ಜೊತೆಗಿನ ರಾಜತಾಂತ್ರಿಕತೆಯಲ್ಲಿ ಇನ್ನೂ ಆಸಕ್ತಿ ಹೊಂದಿದ್ದಾರೆ ಎಂದು ಶ್ವೇತಭವನ ಸೋಮವಾರ ಹೇಳಿದೆ.

ಇರಾನ್ ಆಡಳಿತವು ಶಾಂತಿಯುತ ರಾಜತಾಂತ್ರಿಕ ಪರಿಹಾರಕ್ಕೆ ನಿರಾಕರಿಸಿದೆ. ಆದರೆ, ಅಧ್ಯಕ್ಷರು ಇನ್ನೂ ಆಸಕ್ತಿ ಹೊಂದಿದ್ದಾರೆ. ದಶಕಗಳಿಂದ ತಮ್ಮನ್ನು ಹಿಂಸಿಸುತ್ತಿರುವ ಆಡಳಿತದಿಂದ ಅಧಿಕಾರವನ್ನು ಅಲ್ಲಿನ ಜನರು ಏಕೆ ಕಸಿದುಕೊಳ್ಳಬಾರದು? ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.

ಇಸ್ರೇಲ್ ಮತ್ತು ಇರಾನ್ ಸಂಘರ್ಷದಲ್ಲಿ ವಾರಾಂತ್ಯ ಮಧ್ಯಪ್ರವೇಶಿಸಿದ ಅಮೆರಿಕ, ಇರಾನ್‌ನ ಭಾರೀ ಭದ್ರತೆಯ ಮತ್ತು ರಹಸ್ಯ ಪರಮಾಣು ತಾಣಗಳ ಮೇಲೆ ಬಂಕರ್ ಬಸ್ಟರ್ ಬಾಂಬ್ ದಾಳಿ ನಡೆಸಿತ್ತು. ಇರಾನಿನ ಮೂರೂ ಪರಮಾಣು ತಾಣಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿತ್ತು.

ADVERTISEMENT

ಇರಾನ್‌ನಲ್ಲಿ ಆಡಳಿತ ಬದಲಾವಣೆ ನಮ್ಮ ಉದ್ದೇಶವಲ್ಲ ಎಂದು ದಾಳಿ ಬಳಿಕ ಅಮೆರಿಕ ಹೇಳಿತ್ತು. ಆದರೆ, ಟ್ರಂಪ್ ಭಾನುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ‘ಇರಾನ್‌ನಲ್ಲಿ ಆಡಳಿತ ಬದಲಾವಣೆ ಏಕೆ ಆಗಬಾರದು???’ ಎಂದು ಬರೆದಿದ್ದರು.

ಶ್ವೇತಭವನದ ಪ್ರಕಾರ, ಇರಾನ್ ಮೇಲೆ ನಡೆಸಿದ ಬಾಂಬ್ ದಾಳಿ ಕಾರ್ಯಾಚರಣೆಯು ಸಂಪೂರ್ಣ ಯಶಸ್ವಿಯಾಗಿದೆ. ಟ್ರಂಪ್ ಮತ್ತೊಂದು ಪೋಸ್ಟ್‌ನಲ್ಲಿ ಪರಮಾಣು ತಾಣಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಘೋಷಿಸಿದ್ದರು.

ಆದರೆ, ಈ ದಾಳಿಯಿಂದ ಇರಾನ್‌ನ ಪರಮಾಣು ಯೋಜನೆಗೆ ಯಾವ ಪ್ರಮಾಣದಲ್ಲಿ ಹಿನ್ನಡೆಯಾಗಿದೆ ಎಂಬುದರ ಕುರಿತು ಯಾವುದೇ ಸ್ವತಂತ್ರ ಪರಿಶೀಲನೆ ನಡೆದಿಲ್ಲ ಎಂದು ವರದಿ ತಿಳಿಸಿದೆ.

ನಾಗರಿಕರ ಅನುಕೂಲಕ್ಕೆ ವಿದ್ಯುತ್ ಉತ್ಪಾದನೆ ನೆಪದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಇರಾನ್ ಪ್ರಯತ್ನಿಸುತ್ತಿದೆ ಎಂದು ಇಸ್ರೇಲ್, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಆರೋಪಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.