ವಾಷಿಂಗ್ಟನ್: ಐರೋಪ್ಯ ಒಕ್ಕೂಟದ 27 ದೇಶಗಳ ಆಮದು ವಸ್ತುಗಳ ಮೇಲೆ ಜೂನ್ 1ರಿಂದ ಶೇ 50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಬೆದರಿಕೆ ಒಡ್ಡಿದ್ದಾರೆ.
ಈ ಬಗ್ಗೆ ತಮ್ಮ ‘ಟ್ರುತ್ ಸೋಷಿಯಲ್’ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ‘ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳ ಮಾತುಕತೆಗಳು ಎತ್ತಲೋ ಸಾಗುತ್ತಿವೆ. ನಿಮ್ಮ ಮೇಲೆ ಶೇ 50ರಷ್ಟು ಸುಂಕ ವಿಧಿಸಲಾಗುವುದು’ ಎಂದಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯೂರೋಪ್‌ನ ಷೇರು ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿದೆ. ಐರೋಪ್ಯ ಒಕ್ಕೂಟದ ದೇಶಗಳ ಮೇಲೆ ಅಮೆರಿಕವು ಈಗಾಗಲೇ ಶೇ 10ರಷ್ಟು ಸುಂಕ ವಿಧಿಸುತ್ತದೆ. ಅಮೆರಿಕವು ಹೊಸ ಸುಂಕವನ್ನು ವಿಧಿಸಿದರೆ, ಎರಡು ಪ್ರಬಲ ಆರ್ಥಿಕತೆಗಳ ಮಧ್ಯೆ ಸಂಘರ್ಷ ಉಂಟಾಗಲಿದೆ. ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಇತರ ದೇಶಗಳ ಮೇಲೆಯೂ ಈ ಬೆಳವಣಿಗೆ ಪ್ರಭಾವ ಬೀರಲಿದೆ.
ಆ್ಯಪಲ್‌ಗೂ ಬೆದರಿಕೆ: ಆ್ಯಪಲ್ ಕಂಪನಿಯು ಅಮೆರಿಕದಲ್ಲಿ ಐಫೋನ್ ತಯಾರಿಕೆಯನ್ನು ಆರಂಭಿಸಿಲ್ಲ. ಇಲ್ಲಿಯೇ ಐಫೋನ್ ತಯಾರಿಸಲು ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆ್ಯಪಲ್ ವಸ್ತುಗಳ ಮೇಲೆ ಕನಿಷ್ಠ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಅವರು ತಮ್ಮ ಪ್ರತ್ಯೇಕ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆ್ಯಪಲ್‌ನ ಷೇರುಗಳ ಮೌಲ್ಯವು ಶೇ 3ರಷ್ಟು ಕಸಿತ ಕಂಡಿವೆ.
‘ಅಮೆರಿಕದಲ್ಲಿ ಐಫೋನ್ ತಯಾರಿಕೆ: ಕಾರ್ಯಸಾಧುವಲ್ಲ’
ಟ್ರಂಪ್ ಅವರ ಈ ಹೊಸ ಬೆದರಿಕೆಯು ಆ್ಯಪಲ್ ಸಿಇಒ ಟಿಮ್ ಕುಕ್ ಅವರ ಮೇಲೆ ಭಾರಿ ಒತ್ತಡ ಹೇರಿದೆ. ಆರ್ಥಿಕ ವಿಶ್ಲೇಷಣೆಗಳನ್ನು ನಡೆಸುವ ‘ವೆಬ್‌ಬುಷ್ ಸೆಕ್ಯುರಿಟೀಸ್’ ಸಂಸ್ಥೆಯ ವಿಶ್ಲೇಷಕ ಡ್ಯಾನ್ ಐವಿಸ್ ಅವರ ಪ್ರಕಾರ ‘ಆ್ಯಪಲ್ ಕಂಪನಿಯು ಏಷ್ಯಾದಲ್ಲಿರುವ ತನ್ನೆಲ್ಲಾ ತಯಾರಿಕಾ ವ್ಯವಸ್ಥೆಯನ್ನು ಅಮೆರಿಕಕ್ಕೆ ವರ್ಗಾಯಿಸುವುದು ಎಂದರೆ ಅದೊಂದು ಕಾಲ್ಪನಿಕ ಕಥೆ ರೀತಿಯಂತಾಗುತ್ತದೆ. ಇದು ಕಾರ್ಯಸಾಧುವೇ ಅಲ್ಲ’ ಎಂದಿದ್ದಾರೆ. ‘ಅಮೆರಿಕದಲ್ಲಿ ಒಂದು ಐಫೋನ್ ಪ್ರೊಮ್ಯಾಕ್ಸ್‌ನ ಬೆಲೆ ಸುಮಾರು ₹1.5 ಲಕ್ಷದಿಂದ ₹1.6 ಲಕ್ಷದವರೆಗೆ ಇದೆ. ಒಂದು ವೇಳೆ ಅಮೆರಿಕದಲ್ಲಿಯೇ ಫೋನ್‌ಗಳು ತಯಾರಾದರೆ ಐಫೋನ್ ಪ್ರೊಮ್ಯಾಕ್ಸ್‌ನ ಬೆಲೆ ಸುಮಾರು ₹3 ಲಕ್ಷವಾಗಲಿದೆ’ ಎಂದು ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರಿಟೀಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.