ADVERTISEMENT

ಪೌರತ್ವದ ವಿಷಯ ಒಳಗೊಂಡ ಹೊಸ ವಲಸೆ ನೀತಿ ರೂಪಿಸಲು ಟ್ರಂಪ್‌ ಚಿಂತನೆ

ಕಾರ್ಯಾದೇಶದ ಬಗ್ಗೆ ಸಿದ್ಧತೆ: ಪೌರತ್ವ ವಿಷಯವೇ ಪ್ರಮುಖ ಅಂಶ

ಪಿಟಿಐ
Published 11 ಜುಲೈ 2020, 12:07 IST
Last Updated 11 ಜುಲೈ 2020, 12:07 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅರ್ಹತೆ ಆಧಾರಿತ ವಲಸೆ ನೀತಿ ರೂಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಾರ್ಯನಿರತರಾಗಿದ್ದಾರೆ.

’ಹೊಸ ನೀತಿಯು ಪೌರತ್ವದ ವಿಷಯವೂ ಒಳಗೊಂಡಿದೆ. ಜತೆಗೆ, ವಲಸಿಗ ಮಕ್ಕಳ ವಿರುದ್ಧ ಮುಂದೂಡಿದ ಕ್ರಮದ (ಡಿಎಸಿಎ) ಬಗ್ಗೆ ಈ ನೀತಿಯಲ್ಲಿ ಪ್ರಮುಖವಾಗಿ ಪರಿಗಣಿಸಲಾಗುವುದು’ ಎಂದು ಎಂದು ಟ್ರಂಪ್‌ ತಿಳಿಸಿದ್ದಾರೆ.

ಸ್ಪಾನಿಷ್‌ ಭಾಷೆಯ ‘ಟೆಲೆಮುಂಡೊ’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಟ್ರಂಪ್‌, ‘ಇದೊಂದು ದೊಡ್ಡ ಮತ್ತು ಅತ್ಯುತ್ತಮ ಮಸೂದೆಯಾಗಲಿದೆ. ಇದು ಅರ್ಹತೆ ಆಧಾರಿತ ಮಸೂದೆಯಾಗಿದೆ. ಇದರಿಂದ ಜನತೆ ಸಂತಸ ಪಡಲಿದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

‘ಡಿಎಸಿಎ ಬಗ್ಗೆ ಡೆಮಾಕ್ರಟಿಕ್‌ ಪಕ್ಷದ ಜತೆ ಚರ್ಚಿಸಲು ಸಿದ್ದನಾಗಿದ್ದೆ. ಆದರೆ, ಆ ಪಕ್ಷದ ಮುಖಂಡರು ನಾವು ಮುಂದಿಟ್ಟ ಅಂಶಗಳನ್ನು ತಿರಸ್ಕರಿಸಿದರು’ ಎಂದು ಹೇಳಿದ್ದಾರೆ.

ದಾಖಲೆಗಳಿಲ್ಲದೆ ಅಮೆರಿಕಕ್ಕೆ ಬಂದ ಪೋಷಕರ ಮಕ್ಕಳಿಗೆ ಕೆಲಸದ ಅನುಮತಿ ಮತ್ತು ಇತರ ರಕ್ಷಣೆಗಳನ್ನು ಒದಗಿಸುವುದು ‘ಡಿಎಸಿಎ’ ಒಳಗೊಂಡಿದೆ. ಇದರಿಂದ ಸುಮಾರು 7 ಲಕ್ಷ ಯುವಕರ ಮೇಲೆ ಪರಿಣಾಮ ಬೀರಲಿದೆ. ಇವರಲ್ಲಿ ಬಹುತೇಕ ಮಂದಿ ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳ ಮೂಲದವರು.

ಅಮೆರಿಕದ ವಲಸೆ ವ್ಯವಸ್ಥೆಯನ್ನು ಪುನರ್‌ ರಚಿಸಲು ಟ್ರಂಪ್‌ ಒಲವು ವ್ಯಕ್ತಪಡಿಸಿದ್ದರು. ವಲಸೆ ನೀತಿಯ ಬಗ್ಗೆಯೂ ಹಲವಾರು ಬಾರಿ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಕೌಟುಂಬಿಕ ಸಂಬಂಧಗಳಿಗಿಂತ ಅರ್ಹತೆಯೇ ಮುಖ್ಯವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.

‘ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ನೀತಿ ರೂಪಿಸುವಲ್ಲಿ ಅಧ್ಯಕ್ಷ ಟ್ರಂಪ್‌ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.