ADVERTISEMENT

ಪರೋಕ್ಷ ಹಿಂಸಾಚಾರಕ್ಕೆ ಕರೆ ನೀಡಿದ ಆರೋಪ: ಖಲ್ಸಾ ಟಿವಿಗೆ ದಂಡ

ಬ್ರಿಟನ್‌: ಮಾಧ್ಯಮದ ಮೇಲೆ ನಿಗಾ ಇಡುವ ಸಂಸ್ಥೆಯ ಕಾರ್ಯಾಚರಣೆ

ಪಿಟಿಐ
Published 13 ಫೆಬ್ರುವರಿ 2021, 6:05 IST
Last Updated 13 ಫೆಬ್ರುವರಿ 2021, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್: ಬ್ರಿಟನ್‌ನಲ್ಲಿರುವ ಸಿಖ್ಖರನ್ನು ಪರೋಕ್ಷವಾಗಿ ಹಿಂಸಾಚಾರಕ್ಕೆ ಕರೆ ನೀಡುವ ಹಾಗೂ ಭಯೋತ್ಪಾದಕ ವಿಷಯ ಉಲ್ಲೇಖಿಸಿರುವ ಸಂಗೀತದ ವಿಡಿಯೊ ಮತ್ತು ಚರ್ಚಾ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಾಕ್ಕಾಗಿ ಬ್ರಿಟನ್‌ನ ಮಾಧ್ಯಮದ ಮೇಲೆ ನಿಗಾ ಇಡುವ ಸಂಸ್ಥೆಯೊಂದು ಖಲ್ಸಾ ಟೆಲಿವಿಷನ್‌ ಲಿಮಿಟೆಡ್ (ಕೆಟಿವಿ)ಗೆ ₹50.24 ಲಕ್ಷ (50 ಸಾವಿರ ಪೌಂಡ್) ದಂಡ ವಿಧಿಸಿದೆ.

ಫೆಬ್ರುವರಿ ಮತ್ತು ನವೆಂಬರ್ 2019ರಲ್ಲಿ ಈ ಸಂಗೀತದ ವಿಡಿಯೊ ಮತ್ತು ಚರ್ಚಾ ಕಾರ್ಯಕ್ರಮ ಪ್ರಸಾರವಾಗಿದೆ. ಈ ಕಾರ್ಯಕ್ರಮಗಳ ವಿರುದ್ಧ ಬ್ರಿಟನ್ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ‘ದಿ ಆಫೀಸ್ ಕಮ್ಯನಿಕೇಷನ್ಸ್‌‘ (ಆಫ್‌ಕಾಮ್– ಒಎಫ್‌ಸಿಒಎಂ) ಶುಕ್ರವಾರ ಕೆಟಿವಿಗೆ ದಂಡ ವಿಧಿಸಿ ಆದೇಶಿಸಿದೆ.

‘ಆಫ್‌ಕಾಮ್‘ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಚಾನೆಲ್‌ ದಂಡ ವಿಧಿಸುವ ಜತೆಗೆ, ತಾನು ನೀಡಿರುವ ಆದೇಶದಲ್ಲಿನ ಹೇಳಿಕೆಗಳನ್ನು ಪ್ರಸಾರ ಮಾಡಬೇಕು ಎಂದು ನಿರ್ದೇಶಿಸಿದೆ. ಜತೆಗೆ, ಈ ಸಂಗೀತದ ವಿಡಿಯೊ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಪುನಃ ಪ್ರಸಾರ ಮಾಡದಂತೆ ಪ್ರಾಧಿಕಾರ ಸೂಚಿಸಿದೆ.

ADVERTISEMENT

‘ನಮ್ಮ ಸಂಸ್ಥೆ ರೂಪಿಸಿರುವ ಪ್ರಸಾರ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದ ಕಾರಣ ಖಲ್ಸಾ ಟೆಲಿವಿಷನ್ ಲಿಮಿಟೆಡ್‌ ಕಂಪನಿಗೆ ಸೇರಿದ ಕೆಟಿವಿ ವಾಹಿನಿಗೆ ಸಂಗೀತ ವಿಡಿಯೊ ಪ್ರಸಾರಕ್ಕಾಗಿ ₹20 ಲಕ್ಷ(20 ಸಾವಿರ ಪೌಂಡ್) ಮತ್ತು ಚರ್ಚಾ ಕಾರ್ಯಕ್ರಮ ಪ್ರಸಾರಕ್ಕಾಗಿ ₹30 ಲಕ್ಷ(30 ಸಾವಿರ ಪೌಂಡ್) ದಂಡ ವಿಧಿಸಲಾಗಿದೆ‘ ಎಂದು ಆಫ್‌ಕಾಮ್ ತಿಳಿಸಿದೆ.

2018ರ ಜುಲೈ 4, 7 ಮತ್ತು 9 ರಂದು ಕೆಟಿವಿ ಬಗ್ಗಾ ಮತ್ತು ಶೇರಾ ಎಂಬ ಸಂಗೀತದ ವಿಡಿಯೊವನ್ನು ಪ್ರಸಾರ ಮಾಡಿತ್ತು. ಈ ಸಂಗೀತದ ವಿಡಿಯೊವನ್ನು ತನಿಖೆಗೆ ಒಳಪಡಿಸಿದಾಗ, ಅದರಲ್ಲಿ ಪರೋಕ್ಷವಾಗಿ ಬ್ರಿಟನ್‌ನ ಸಿಖ್‌ ನಿವಾಸಿಗಳಿಗೆ ಕೊಲೆ ಮತ್ತು ಹಿಂಸಾಚಾರಕ್ಕಾಗಿ ಕರೆ ನೀಡುವ ಅಂಶಗಳಿರುವುದಾಗಿ ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.