ಲಂಡನ್ (ಪಿಟಿಐ): ನಿಷೇಧಿತ ಪ್ಯಾಲೆಸ್ಟೀನ್ ಪರ ಸಂಘಟನೆ ‘ಪ್ಯಾಲೆಸ್ಟೀನ್ ಆ್ಯಕ್ಷನ್’ಗೆ ಬೆಂಬಲ ನೀಡಿ ಬ್ರಿಟನ್‌ನ ಸಂಸತ್ತಿನ ಆವರಣದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಒಟ್ಟು 474 ಜನರನ್ನು ಶನಿವಾರ ಬಂಧಿಸಲಾಗಿದೆ ಎಂದು ಲಂಡನ್ ಪೊಲೀಸರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಕಳೆದ ಒಂದು ದಶಕದಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟು ಜನರನ್ನು ಬಂಧಿಸಿರುವುದು ಇದೇ ಮೊದಲು.
‘ಪ್ಯಾಲೆಸ್ಟೀನ್ ಆ್ಯಕ್ಷನ್’ ಸಂಘಟನೆಯನ್ನು ನಿಷೇಧಿಸಿ ಬ್ರಿಟನ್ ಸರ್ಕಾರ ಜುಲೈ 5ರಂದು ಆದೇಶ ಹೊರಡಿಸಿತು. ಈ ಸಂಘಟನೆಗೆ ಬೆಂಬಲ ನೀಡುವುದು ಕ್ರಿಮಿನಲ್ ಅಪರಾಧವೆಂದು, ಬೆಂಬಲ ನೀಡಿದರೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಘೋಷಿಸಿತು.
ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ್ದಕ್ಕಾಗಿ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ 466 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಬಹುತೇಕರು, ಪ್ಯಾಲೆಸ್ಟೀನ್ ಪರ ಬರಹಗಳಿರುವ ಫಲಕಗಳನ್ನು ಹಿಡಿದಿದ್ದರು. ಪೊಲೀಸ್ ಅಧಿಕಾರಿಗಳನ್ನು ನಿಂದಿಸಿರುವುದು ಸೇರಿದಂತೆ ಇತರ ಆರೋಪಗಳ ಮೇಲೆ 8 ಮಂದಿಯನ್ನು ಬಂಧಿಸಲಾಗಿದೆ.
‘ಪ್ಯಾಲೆಸ್ಟೀನ್ ಆ್ಯಕ್ಷನ್’ ಸಂಘಟನೆಯು ಹಿಂಸೆಯಲ್ಲಿ ತೊಡಗಿದ್ದು, ಇದರಿಂದ ಹಲವರು ಗಾಯಗೊಂಡರು. ಸಂಘಟನೆಯಿಂದ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಭದ್ರತೆಗಾಗಿ ಇದನ್ನು ನಿಷೇಧಿಸಲಾಯಿತು’ ಎಂದು ಗೃಹ ಕಾರ್ಯದರ್ಶಿ ಯಿವೆಟ್ ಕೂಪರ್ ಹೇಳಿದರು. ಕಾರ್ಯಾಚರಣೆ ನಡೆಸಿ ಅನೇಕರನ್ನು ಬಂಧಿಸಿದ ಪೊಲೀಸರನ್ನು ಅವರು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.