ADVERTISEMENT

ಉಕ್ರೇನ್‌ ಸೇನಾ ಬತ್ತಳಿಕೆ ಬರಿದು?

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 15:39 IST
Last Updated 10 ಜೂನ್ 2022, 15:39 IST
ಉಕ್ರೇನ್‌ ಪೂರ್ವದ ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾ ಮತ್ತು ಉಕ್ರೇನ್‌ ಪಡೆಗಳ ನಡುವಿನ ಯುದ್ಧದಲ್ಲಿ ಸೆವೆರೊಡೊನೆಟ್‌ಸ್ಕ್‌ ಮತ್ತು ಲೈಸಿಚಾನ್‌ಸ್ಕ್‌ ಅವಳಿ ನಗರಗಳಲ್ಲಿ ಶುಕ್ರವಾರ ಕಟ್ಟಡಗಳು ಹಾನಿಗೀಡಾಗಿದ್ದು, ಶೆಲ್‌ ದಾಳಿಯಿಂದ ದಟ್ಟ ಹೊಗೆ ಆವರಿಸಿದೆ– ಎಎಫ್‌ಪಿ ಚಿತ್ರ 
ಉಕ್ರೇನ್‌ ಪೂರ್ವದ ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾ ಮತ್ತು ಉಕ್ರೇನ್‌ ಪಡೆಗಳ ನಡುವಿನ ಯುದ್ಧದಲ್ಲಿ ಸೆವೆರೊಡೊನೆಟ್‌ಸ್ಕ್‌ ಮತ್ತು ಲೈಸಿಚಾನ್‌ಸ್ಕ್‌ ಅವಳಿ ನಗರಗಳಲ್ಲಿ ಶುಕ್ರವಾರ ಕಟ್ಟಡಗಳು ಹಾನಿಗೀಡಾಗಿದ್ದು, ಶೆಲ್‌ ದಾಳಿಯಿಂದ ದಟ್ಟ ಹೊಗೆ ಆವರಿಸಿದೆ– ಎಎಫ್‌ಪಿ ಚಿತ್ರ    

ವಾಷಿಂಗ್ಟನ್‌/ಕೀವ್‌ (ಎಎಫ್‌ಪಿ/ರಾಯಿಟರ್ಸ್‌):‘ಸೋವಿಯತ್, ರಷ್ಯಾ ವಿನ್ಯಾಸಗೊಳಿಸಿದ್ದ ತನ್ನಲ್ಲಿದ್ದಶಸ್ತ್ರಾಸ್ತ್ರಗಳನ್ನು ಉಕ್ರೇನ್‌ ಖಾಲಿ ಮಾಡಿಕೊಂಡಿದ್ದು, ಈಗ ದೇಶ ರಕ್ಷಣೆಗೆ ಶಸ್ತ್ರಾಸ್ತ್ರಗಳಿಗಾಗಿ ಮಿತ್ರರಾಷ್ಟ್ರಗಳ ಮೇಲೆ ಸಂಪೂರ್ಣ ಅವಲಂಬಿತವಾಗಿದೆ’ ಎಂದು ಅಮೆರಿಕದ ಸೇನಾ ಮೂಲಗಳು ತಿಳಿಸಿವೆ.

‘ಮೂರು ತಿಂಗಳಿಗೂ ಹೆಚ್ಚು ಅವಧಿಯಿಂದರಷ್ಯಾದ ಆಕ್ರಮಣ ನಡೆಯುತ್ತಿದ್ದು, ಉಕ್ರೇನ್ ತನ್ನ ಬತ್ತಳಿಕೆಯಲ್ಲಿದ್ದ ಯುದ್ಧೋಪಕರಣಗಳನ್ನು ಬಳಸಿ ಬರಿದು ಮಾಡಿಕೊಂಡಿದೆ ಅಥವಾ ಅವುಗಳನ್ನು ರಷ್ಯಾ ಸೇನೆ ನಾಶಪಡಿಸಿದೆ. ಉಕ್ರೇನ್‌ ಪಡೆಗಳು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಹಾಗೂ ನ್ಯಾಟೊ ರಾಷ್ಟ್ರಗಳು ಪೂರೈಸಿದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿವೆ’ ಎಂದು ಸೇನಾ ಮೂಲಗಳು ಹೇಳಿವೆ.

ಒಂದು ಕಾಲಕ್ಕೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದಉಕ್ರೇನ್‌ನ ಸೇನೆ ಮತ್ತು ಅದರ ರಕ್ಷಣಾ ಉದ್ಯಮವು ಸೋವಿಯತ್ ಮತ್ತು ರಷ್ಯಾದ ಪ್ರಮಾಣಿತ ಉಪಕರಣಗಳು, ಸಣ್ಣ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ಹೊವಿಟ್ಜರ್‌ಗಳು ಮತ್ತು ಇತರ ಆಯುಧಗಳನ್ನು ಅವಲಂಬಿಸಿತ್ತು. ಈ ಶಸ್ತ್ರಾಸ್ತ್ರಗಳನ್ನುಪಶ್ಚಿಮದ ನೆರೆಹೊರೆಯ ದೇಶಗಳ ತಂತ್ರಜ್ಞಾನದೊಂದಿಗೆ ಹೊಂದಿಸಿಕೊಳ್ಳಲು ಮತ್ತು ಉನ್ನತೀಕರಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಇದಕ್ಕೆ ರಷ್ಯಾವನ್ನೇ ಅವಲಂಬಿಸಬೇಕಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಪೂರ್ವ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಪಡೆಗಳು ಸೆವೆರೊಡೊನೆಟ್‌ಸ್ಕ್‌ ನಗರದ ಮೇಲೆ ಬಾಂಬ್‌ ಮತ್ತು ಹಗಲು –ರಾತ್ರಿ ಶೆಲ್‌ ದಾಳಿ ನಡೆಸುತ್ತಿವೆ. ಉಕ್ರೇನ್‌ ಪಡೆಗಳೂ ನಿಯಂತ್ರಣ ಉಳಿಸಿಕೊಳ್ಳಲು ಶುಕ್ರವಾರ ತೀವ್ರ ಪ್ರತಿರೋಧ ತೋರಿವೆ.

‘ದಕ್ಷಿಣದಲ್ಲಿ, ಕೆರ್ಸಾನ್‌ ಮತ್ತು ಝಪೊರಿಝಿಯಾ ಪ್ರಾಂತ್ಯಗಳ ಮೇಲೆ ರಷ್ಯಾ ತನ್ನ ಆಡಳಿತ ಹೇರಲು ಪ್ರಯತ್ನಿಸುತ್ತಿದೆ. ಕೆರ್ಸಾನ್ ಪ್ರಾಂತ್ಯದಲ್ಲಿ ಪ್ರತಿದಾಳಿ ನೆಡೆಸಿ, ನಮ್ಮ ಪಡೆಗಳು ಭಾಗಶಃ ಮರುವಶ ಪಡೆದಿವೆ’ ಎಂದುಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ.

ಉಕ್ರೇನ್‌ ಆಕ್ರಮಣ;ನಾರ್ದರ್ನ್ ಯುದ್ಧಕ್ಕೆ ಸಮೀಕರಣ

ಮಾಸ್ಕೊದಲ್ಲಿ ನಡೆದ ರಷ್ಯಾದ ಝಾರ್‌ ದೊರೆ ಪೀಟರ್‌ ಅವರ 350ನೇ ಜಯಂತಿಯಲ್ಲಿ ಮಾತನಾಡಿದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಷ್ಯಾದಐತಿಹಾಸಿಕ ಭೂಮಿಯನ್ನು ಮರಳಿ ಗೆಲ್ಲಲು ನಡೆಸುತ್ತಿರುವ ತಮ್ಮ ಸೇನಾ ಕಾರ್ಯಾಚರಣೆಯನ್ನು ‌ನಾರ್ದರ್ನ್ ಮಹಾ ಯುದ್ಧಕ್ಕೆ ಸಮೀಕರಿಸಿದರು.

‘ಪೀಟರ್ 21 ವರ್ಷ ಕಾಲ ಗ್ರೇಟ್ ನಾರ್ದರ್ನ್ ಯುದ್ಧ ನಡೆಸಿದರು. ಅವರು ಸ್ವೀಡನ್‌ ಜತೆಗಿನ ಯುದ್ಧದಲ್ಲಿ ಅವರಿಂದ ಕಸಿದುಕೊಂಡರು. ಆದರೆ, ಇವರಿಂದ (ರಷ್ಯಾ ಕಡೆಯಿಂದ) ಎದುರಾಳಿಗಳಿಗೆ ಏನನ್ನೂ ತೆಗೆದುಕೊಳ್ಳಲಾಗದೆ ಹಿಂದಿರುಗಿದರು’ ಎಂದು ಪುಟಿನ್ ಹೇಳಿದರು.

ನ್ಯಾಟೊ ಶೃಂಗಸಭೆಗೆ ಝೆಲೆನ್‌ಸ್ಕಿ:

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಇದೇ 28 ಮತ್ತು 29ರಂದು ನಡೆಯುವ ನ್ಯಾಟೊ ಶೃಂಗಸಭೆಗೆ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಆಹ್ವಾನಿಸಲಾಗಿದೆ ಎಂದು ನ್ಯಾಟೊ ಉಪ ಮಹಾಪ್ರಧಾನ ಕಾರ್ಯದರ್ಶಿ ಮಿರ್ಚಾ ಜೋನೆ ತಿಳಿಸಿದ್ದಾರೆ.

‘ಶೃಂಗಸಭೆಯಲ್ಲಿ ಮೊದಲ ಬಾರಿಗೆ ಪೆಸಿಫಿಕ್ - ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಖಂಡಿತವಾಗಿಯೂ ನ್ಯಾಟೊ ವಿಸ್ತರಣೆ ಮತ್ತು ತೆರೆದ ಬಾಗಿಲು ನೀತಿಯು ಚರ್ಚೆಯ ಪ್ರಮುಖ ವಿಷಯವಾಗಿದೆ. ಫಿನ್ಲೆಂಡ್‌ ಮತ್ತು ಸ್ವೀಡನ್ ನ್ಯಾಟೊ ಸೇರಲಿವೆ. ಉಕ್ರೇನ್ ಸೇರ್ಪಡೆಯನ್ನು ನಾವು ನಿರ್ಧರಿಸಬೇಕಿದೆ’ ಎಂದು ಜೋನೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.