ADVERTISEMENT

ಇರಾನ್‌: ಇಬ್ರಾಹಿಂ ರೈಸಿ ನೂತನ ಅಧ್ಯಕ್ಷರಾಗಿ ಆಯ್ಕೆ

ಹರಿದುಬಂದ ಅಭಿನಂದನೆಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 9:55 IST
Last Updated 19 ಜೂನ್ 2021, 9:55 IST
ಇಬ್ರಾಹಿಂ ರೈಸಿ
ಇಬ್ರಾಹಿಂ ರೈಸಿ   

ಟೆಹರಾನ್‌, ಅಂಕಾರಾ: ‘ಇರಾನ್‌ನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಅವರು ಆಯ್ಕೆಯಾಗಿದ್ದಾರೆ.

ವಿದೇಶಾಂಗ ಸಚಿವ ಮೊಹಮ್ಮದ್ ಜಾವಾದ್ ಜರೀಫ್ ಶನಿವಾರ ರೈಸಿ ಅವರ ಆಯ್ಕೆಯನ್ನು ಘೋಷಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿತ್ತು. ರೈಸಿ ಅವರ ಪರ 1.78 ಕೋಟಿ ಮತಗಳು ಚಲಾವಣೆಯಾಗಿವೆ. ರೈಸಿ ಅವರ ಪ್ರತಿಸ್ಪರ್ಧಿಯಾಗಿದ್ದ ಮೊಹಸೆನ್‌ ರೆಝಿ 33 ಲಕ್ಷ ಹಾಗೂ ಹೆಮ್ಮಟ್ಟಿ 24 ಲಕ್ಷ ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರೈಸಿ ಅವರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿ ಹಲವು ನಾಯಕರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು.

60 ವರ್ಷದ ರೈಸಿ ಅವರು ಆಗಸ್ಟ್‌ನಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇರಾನ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇಬ್ರಾಹಿಂ ರೈಸಿ ಅವರು ಕಾರ್ಯನಿರ್ವಹಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಬಡವರಿಗೆ 40 ಲಕ್ಷ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರೈಸಿ ಭರವಸೆ ನೀಡಿದ್ದರು.

ರೈಸಿ ಅವರ ಆಯ್ಕೆಗೆ ಶುಭಾಶಯ ಕೋರಿರುವ ಇರಾನ್‌ ಹಾಲಿ ಅಧ್ಯಕ್ಷ ಮತ್ತು ಅಧ್ಯಕ್ಷೀಯ ಚುನಾವಣೆಯ ಪ್ರತಿಸ್ಪರ್ಧಿ ಹಸನ್‌ ರೌಹಾನಿ ಅವರು,‘ಜನರು ತಮ್ಮ ನಾಯಕನನ್ನು ಆರಿಸಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದಿದ್ದಾರೆ.

ಅಮೆರಿಕದ ನಿರ್ಬಂಧ, ಅಣ್ವಸ್ತ್ರ ಯೋಜನೆ ಸೇರಿದಂತೆ ಹಲವು ಕಠಿಣ ಪರಿಸ್ಥಿತಿಗಳನ್ನು ಇರಾನ್‌ ಎದುರಿಸುತ್ತಿರುವ ಈ ಸಂದರ್ಭದಲ್ಲಿ ರೈಸಿ ಅವರು ಇರಾನ್‌ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ.

ಇಬ್ರಾಹಿಂ ರೈಸಿ ಅವರು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಆಪ್ತರು ಕೂಡ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.