ADVERTISEMENT

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ: ರಷ್ಯಾ ಅಮಾನತು ನಿರ್ಣಯದ ಮೇಲೆ ಇಂದು ಮತದಾನ

ಪಿಟಿಐ
Published 7 ಏಪ್ರಿಲ್ 2022, 7:00 IST
Last Updated 7 ಏಪ್ರಿಲ್ 2022, 7:00 IST
ಐಎಎನ್ಎಸ್‌ ಚಿತ್ರ
ಐಎಎನ್ಎಸ್‌ ಚಿತ್ರ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ಕರಡು ನಿರ್ಣಯದ ಮೇಲೆ ಗುರುವಾರ ಸಾಮಾನ್ಯ ಸಭೆಯಲ್ಲಿ ಮತದಾನ ನಡೆಯಲಿದೆ. ಉಕ್ರೇನ್‌ನ ನಗರ ಬುಕಾದ ಬೀದಿಗಳಲ್ಲಿ ರಷ್ಯಾದ ಸೇನೆಯಿಂದ ಕ್ರೂರವಾಗಿ ಹತ್ಯೆಯಾದ ಜನರ ಶವಗಳ ಚಿತ್ರಗಳು ಪತ್ತೆಯಾದ ನಂತರ ಅಮೆರಿಕವು ಈ ನಿರ್ಣಯವನ್ನು ಮಂಡಿಸಿತ್ತು.

ಇಂತಹ ಹೀನ ಕೃತ್ಯ ನಡೆಸಿದ ಬಳಿಕವೂ ರಷ್ಯಾವು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಮಂಡಳಿಯಲ್ಲಿ ಮುಂದುವರಿಯುವುದು ‘ಹಾಸ್ಯಾಸ್ಪದ’ವಾಗಿದೆ ಎಂದು ಅಮೆರಿಕ ಹೇಳಿದೆ.

ಆಂಟಿಗುವಾ ಮತ್ತು ಬಾರ್ಬುಡಾ, ಕೆನಡಾ, ಕೊಲಂಬಿಯಾ, ಕೋಸ್ಟರಿಕಾ, ಜಾರ್ಜಿಯಾ, ಜಪಾನ್, ಲೈಬೀರಿಯಾ, ರಿಪಬ್ಲಿಕ್ ಆಫ್ ಮೊಲ್ಡೊವಾ, ಉಕ್ರೇನ್, ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ 27 ಸದಸ್ಯರ ರಾಷ್ಟ್ರಗಳ ನಿಯೋಗದ ಮುಖ್ಯಸ್ಥರ ಮನವಿಯ ನಂತರ ಸಾಮಾನ್ಯ ಸಭೆಯಲ್ಲಿ ತುರ್ತು ವಿಶೇಷ ಅಧಿವೇಶನವನ್ನು ಗುರುವಾರ ಪುನರಾರಂಭಿಸಲಾಗುತ್ತಿದೆ.

ADVERTISEMENT

'ಮಾನವ ಹಕ್ಕುಗಳ ಮಂಡಳಿಯಲ್ಲಿ ರಷ್ಯಾ ಒಕ್ಕೂಟದ ಸದಸ್ಯತ್ವದ ಹಕ್ಕುಗಳನ್ನು ಅಮಾನತು' ಕರಡು ನಿರ್ಣಯದ ಮೇಲೆ ಅಧಿವೇಶನದಲ್ಲಿ ಮತದಾನ ನಡೆಯಲಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು 47 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇದರ ಸದಸ್ಯರು ಸಾಮಾನ್ಯ ಸಭೆಯಿಂದ ನೇರವಾಗಿ ಮತ್ತು ರಹಸ್ಯ ಮತದಾನದ ಮೂಲಕ ಚುನಾಯಿತರಾಗುತ್ತಾರೆ.

ಸಾಮಾನ್ಯ ಸಭೆಯಲ್ಲಿ ಹಾಜರಿರುವ ಸದಸ್ಯರ ಪೈಕಿ ಮೂರನೇ ಎರಡರಷ್ಟು ಬಹುಮತದ ಆಧಾರದ ಮೇಲೆ ‘ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆಗಳನ್ನು ಮಾಡುವ ಮಾನವ ಹಕ್ಕುಗಳ ಮಂಡಳಿಯ ಸದಸ್ಯರ ಸದಸ್ಯತ್ವದ ಹಕ್ಕುಗಳನ್ನು ಅಮಾನತುಗೊಳಿಸಬಹುದು’, ಗೈರುಹಾಜರಿಗಳನ್ನು ಪರಿಗಣಿಸಲಾಗುವುದಿಲ್ಲ.

'ಮಾನವ ಹಕ್ಕುಗಳ ಮಂಡಳಿಯಲ್ಲಿ ರಷ್ಯಾ ಒಕ್ಕೂಟದ ಸದಸ್ಯತ್ವದ ಹಕ್ಕುಗಳ ಅಮಾನತು' ಶೀರ್ಷಿಕೆಯ ಕರಡು ನಿರ್ಣಯವು ಮಾರ್ಚ್ 4, 2022ರ ಮಾನವ ಹಕ್ಕುಗಳ ಮಂಡಳಿಯ ನಿರ್ಣಯವನ್ನು ಸೂಚಿಸುತ್ತದೆ. ಉಕ್ರೇನ್ ವಿರುದ್ಧ ಆಕ್ರಮಣ ಮಾಡಿರುವ ರಷ್ಯಾವು ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆ ಮಾಡಿರುವುದು ಹಾಗೂ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.