ADVERTISEMENT

ಬ್ರಿಟನ್‌: ನಿಧಾನಗತಿಯಲ್ಲಿ ಹಬ್ಬುತ್ತಿರುವ ರೂಪಾಂತರ ತಳಿ

ಲಾಕ್‌ಡೌನ್‌ ತೆರವುಗೊಳಿಸುವ ಯೋಜನೆಗೆ ಅಡ್ಡಿಯಾಗುವ ಸಾಧ್ಯತೆ: ಪ್ರಧಾನಿ ಬೋರಿಸ್‌ ಜಾನ್ಸನ್‌

ರಾಯಿಟರ್ಸ್
Published 19 ಮೇ 2021, 11:23 IST
Last Updated 19 ಮೇ 2021, 11:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಡನ್‌: ಭಾರತದಲ್ಲಿ ಪತ್ತೆಯಾದ ಕೋವಿಡ್‌–19 ರೂಪಾಂತರ ತಳಿಯು ಬ್ರಿಟನ್‌ನಲ್ಲಿ ಕಡಿಮೆ ವೇಗದಲ್ಲಿ ಹಬ್ಬುತ್ತಿದೆ ಎಂದು ಬ್ರಿಟನ್‌ನ ವೈರಾಣು ತಜ್ಞರು ಹೇಳಿದ್ದಾರೆ.

ಆದರೆ, ಈ ತಳಿ ಹಬ್ಬುವುದನ್ನು ನಿಯಂತ್ರಿಸುವಲ್ಲಿ ಲಸಿಕೆ ಸಹ ಕಡಿಮೆ ಪರಿಣಾಮಕಾರಿಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಪ್ರಯಾಣ ಕೈಗೊಂಡವರಲ್ಲಿ ಅತಿ ವೇಗವಾಗಿ ಬಿ.1.617.2 ರೂಪಾಂತರ ತಳಿಯ ವೈರಸ್‌ ಕಾಣಿಸಿಕೊಂಡಿತ್ತು. ಆದರೆ, ಇತ್ತೀಚಿನ ಮಾಹಿತಿಯನ್ನು ವಿಶ್ಲೇಷಿಸಿದಾಗ ಈ ರೂಪಾಂತರ ತಳಿ ಕಡಿಮೆ ಪ್ರಮಾಣದಲ್ಲಿ ಹಬ್ಬುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ’ ಎಂದು ಲಂಡನ್‌ನ ಇಂಪಿರಿಯಲ್‌ ಕಾಲೇಜಿನ ವೈರಾಣು ತಜ್ಞ ನೀಲ್‌ ಫರ್ಗುಸನ್‌ ತಿಳಿಸಿದ್ದಾರೆ. ಫರ್ಗುಸನ್‌ ಅವರು ತುರ್ತು ಪರಿಸ್ಥಿತಿಗಾಗಿ ಸರ್ಕಾರ ನೇಮಿಸಿರುವ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

ADVERTISEMENT

‘ಲಸಿಕೆಯಿಂದಾಗಿ ತೀವ್ರ ಸ್ವರೂಪದ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ ಎನ್ನುವ ವಿಶ್ವಾಸ ಮೂಡಿಸಿತ್ತು. ಆದರೆ, ಲಸಿಕೆ ಹಾಕಿಸಿಕೊಂಡವರಲ್ಲಿ ಬಿ.1.617.2 ರೂಪಾಂತರ ತಳಿ ಸಹ ಸುಲಭವಾಗಿ ಹಬ್ಬುವ ಸಾಧ್ಯತೆ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕೆಲವು ಸ್ಥಳಗಳಲ್ಲಿ ಮಾತ್ರ ಈ ತಳಿ ವೇಗವಾಗಿ ಹಬ್ಬುತ್ತಿದೆ. ಆದರೆ, ಎಲ್ಲ ಸ್ಥಳಗಳಲ್ಲಿ ಇದೇ ಪ್ರಮಾಣದಲ್ಲಿ ಹಬ್ಬುತ್ತಿಲ್ಲ’ ಎಂದು ವೈಜ್ಞಾನಿಕ ಸಲಹಾ ಸಮಿತಿಯ ಇನ್ನೊಬ್ಬ ಸದಸ್ಯ ಪ್ರೊಫೆಸರ್‌ ಗ್ರಹಾಂ ಮೆಡ್ಲಿ ತಿಳಿಸಿದ್ದಾರೆ.

’ಬ್ರಿಟನ್‌ನಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್‌ ಅನ್ನು ಜೂನ್‌ 21ರ ವೇಳೆಗೆ ಸಂಪೂರ್ಣವಾಗಿ ತೆರವುಗೊಳಿಸುವ ಯೋಜನೆಯನ್ನು ಈಗ ಪುನರ್‌ಪರಿಶೀಲಿಸಬೇಕಾಗಿದೆ. ಬಿ.1.617.2 ರೂಪಾಂತರ ತಳಿ ಯಾವ ರೀತಿಯಲ್ಲಿ ಹಬ್ಬುತ್ತದೆ ಎನ್ನುವುದನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಶುಕ್ರವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.