ADVERTISEMENT

ಅಮೆರಿಕ: ಕೌಶಲ ವೃದ್ಧಿ ತರಬೇತಿಗೆ ₹ 1100 ಕೋಟಿ

ಪಿಟಿಐ
Published 25 ಸೆಪ್ಟೆಂಬರ್ 2020, 8:02 IST
Last Updated 25 ಸೆಪ್ಟೆಂಬರ್ 2020, 8:02 IST
ಪ್ರಾತಿನಿಧಕ ಚಿತ್ರ
ಪ್ರಾತಿನಿಧಕ ಚಿತ್ರ   

ವಾಷಿಂಗ್ಟನ್ : ಆರ್ಥಿಕ ವ್ಯವಸ್ಥೆಯ ಪ್ರಮುಖ ಕ್ಷೇತ್ರಗಳಲ್ಲಿಎಚ್-1ಬಿ ವೀಸಾ ಹೊಂದಿರುವ ಮಧ್ಯಮದಿಂದ ಉನ್ನತಕೌಶಲದ ಉದ್ಯೋಗಿಗಳಿಗೆ ಉನ್ನತಮಟ್ಟದ ತರಬೇತಿ ನೀಡಲು ಅಮರಿಕ ಸುಮಾರು ₹ 1100 ಕೋಟಿ ಹೂಡಿಕೆಯನ್ನು ಪ್ರಕಟಿಸಿದೆ.

ಈ ಕ್ಷೇತ್ರಗಳಲ್ಲಿ ಪ್ರಮುಖವಾಗಿ ತಂತ್ರಜ್ಞಾನ, ಸೈಬರ್ ಸುರಕ್ಷೆ, ಅತ್ಯಾಧುನಿಕ ಉತ್ಪಾದನಾ ವಲಯ, ಸಾರಿಗೆ ಸೇವೆ ಇವೆ. ಇಲ್ಲಿ ಎಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಈ ಸಿಬ್ಬಂದಿಯ ಕೌಶಲವನ್ನು ವೃದ್ಧಿಸುವುದು ಹೂಡಿಕೆಯ ಉದ್ದೇಶ.

ಭವಿಷ್ಯದ ಕಾರ್ಯಪಡೆಯನ್ನು ಸಜ್ಜುಗೊಳಿಸಲು ಯುವ ಪೀಳಿಗೆಗೆ ತರಬೇತಿ ನೀಡುವುದು ಉದ್ದೇಶಿತ ಹೂಡಿಕೆಯ ಗುರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟಿಸಿದೆ.

ADVERTISEMENT

ಕೊರೊನಾ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯು ಕೇವಲ ಕಾರ್ಮಿಕ ವಲಯದ ಮೇಲಷ್ಟೇ ಅಲ್ಲ, ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ, ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದೆ.

ಈ ಬೃಹತ್ ಕಾರ್ಯಕ್ರಮದಡಿ ಉದ್ಯೋಗ ಮತ್ತು ತರಬೇತಿ ಇಲಾಖೆಯು ಹೆಚ್ಚಿನ ತರಬೇತಿ ಸಂಪನ್ಮೂಲ ಒದಗಿಸಲಿದೆ. ಕೌಶಲ ವೃದ್ಧಿ, ಹೊಸ ಅನ್ವೇಷಣೆ, ನೋಂದಾಯಿತ ತರಬೇತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ತರಗತಿ, ಉದ್ಯೋಗ ಸ್ಥಳದಲ್ಲಿನ ತರಬೇತಿ ಕೂಡಾ ಇರಲಿದೆ ಎಂದು ಇಲಾಖೆಯ ಉಪ ಕಾರ್ಯದರ್ಶಿ ಜಾನ್ ಪಲಾಶ್ಚ್ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.