ರಾಯಿಟರ್ಸ್ ಚಿತ್ರ
ಕೈರೊ/ಜೆರುಸೆಲೇಂ/ವಿಶ್ವ ಸಂಸ್ಥೆ: ಕಳೆದ ಕೆಲವು ದಿನಗಳಿಂದ ಗಾಜಾದ ಜನರಿಗೆ ಆಹಾರ ಸೇರಿದಂತೆ ಹಲವು ರೀತಿಯ ಮಾನವೀಯ ನೆರವು ನೀಡುತ್ತಿದ್ದ ಅಮೆರಿಕದ ‘ಗಾಜಾ ಹ್ಯುಮ್ಯಾನಿಟೇರಿಯನ್ ಫೌಂಡೇಶನ್’ ಬುಧವಾರ ಜನರಿಗೆ ಯಾವುದೇ ನೆರವು ನೀಡದೆ ಹಿಂತಿರುಗಿದೆ. ‘ಗಾಜಾ ನಾಗರಿಕರಿಗೆ ಸೂಕ್ತ ರಕ್ಷಣೆ ಒದಗಿಸಿ’ ಎಂದು ಸಂಸ್ಥೆಯು ಇಸ್ರೇಲ್‌ಗೆ ಹೇಳಿದೆ.
‘ನೆರವು ವಿತರಣೆ ಮಾಡುತ್ತಿದ್ದ ಸ್ಥಳಕ್ಕೆ ಬರುವ ಗಾಜಾ ಜನರ ಮೇಲೆ ಗುಂಡಿನ ದಾಳಿ ನಡೆಯುತ್ತಿದೆ. ಮಂಗಳವಾರ 27 ಮಂದಿ ಮೃತಪಟ್ಟಿದ್ದಾರೆ. ಭಾನುವಾರದಿಂದ ಈಚೆಗೆ ಮೂರು ದಿನಗಳಲ್ಲಿ ಸುಮಾರು 80 ಜನರು ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ’ ಎಂದು ಗಾಜಾದ ಆಸ್ಪತ್ರೆಯೊಂದರ ಅಧಿಕಾರಿಗಳು ಹೇಳಿದ್ದಾರೆ.
‘ಗೊಂದಲಗಳು ಆಗದಂತೆ, ತೊಂದರೆಗಳು ತಲೆದೋರದಂತೆ ಹೇಗೆ ನಡೆಯಬೇಕು ಎಂಬುದರ ಕುರಿತು ಜನರಿಗೆ ಮಾರ್ಗದರ್ಶನ ಮಾಡಿ’ ಎಂದು ಸಂಸ್ಥೆ ಹೇಳಿದೆ. ‘ಆಹಾರ ಪಡೆದುಕೊಳ್ಳಲು ನಿಂತುಕೊಂಡಿದ್ದ ಜನರ ಮೇಲೆ ಇಸ್ರೇಲ್‌ನ ಸೈನಿಕರು ಗುಂಡು ಹಾರಿಸಿದರು’ ಎಂದು ಗಾಜಾ ಜನರು ಹೇಳುತ್ತಿದ್ದಾರೆ.
ಈ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ. ಆದರೆ, ಮಂಗಳವಾರ ಗುಂಡಿನ ದಾಳಿ ನಡೆಸಿದ್ದನ್ನು ಇಸ್ರೇಲ್ ಒಪ್ಪಿಕೊಂಡಿದೆ. ‘ಕೆಲವು ಶಂಕಾಸ್ಪದ ವ್ಯಕ್ತಿಗಳಿಗೆ ಗುಂಡು ಹಾರಿಸಲಾಗಿದೆ. ಅವರು ಯುದ್ಧ ವಲಯದ ಒಳಗೆ ಬರುತ್ತಿದ್ದರು. ಎಚ್ಚರಿಕೆ ನೀಡಿದರೂ ಅವರು ಹಿಂದೆ ಸರಿಯಲಿಲ್ಲ’ ಎಂದು ಹೇಳಿದೆ. ಅಮೆರಿಕ ಸಂಸ್ಥೆಯು ನೆರವು ವಿತರಣೆ ಮಾಡುತ್ತಿದ್ದ ಜಾಗವನ್ನು ಇಸ್ರೇಲ್ ಯುದ್ಧ ವಲಯ ಎಂದು ಕರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.