ADVERTISEMENT

ಅಮೆರಿಕ ಆರ್ಥಿಕತೆಗೆ ಪುನಶ್ಚೇತನ: 900 ಶತಕೋಟಿ ಡಾಲರ್‌ ಪ್ಯಾಕೇಜ್‌ಗೆ ಅನುಮೋದನೆ

ಏಜೆನ್ಸೀಸ್
Published 22 ಡಿಸೆಂಬರ್ 2020, 7:16 IST
Last Updated 22 ಡಿಸೆಂಬರ್ 2020, 7:16 IST
ಡಾಲರ್‌
ಡಾಲರ್‌    

ವಾಷಿಂಗ್ಟನ್‌: ಕೋವಿಡ್‌–19 ಪಿಡುಗಿನಿಂದ ಕುಸಿದಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ 900 ಶತಕೋಟಿ ಡಾಲರ್‌ (₹ 66.52 ಲಕ್ಷ ಕೋಟಿ) ಪ್ಯಾಕೇಜ್‌ಗೆ ಅಮೆರಿಕದ ಸಂಸತ್‌ ಅನುಮೋದನೆ ನೀಡಿದೆ.

ಬಹು ನಿರೀಕ್ಷಿತ ಈ ಕ್ರಮದಿಂದ ಲಕ್ಷಾಂತರ ಜನರಿಗೆ ಹಾಗೂ ಉದ್ದಿಮೆಗಳಿಗೆ ನೆರವಾಗಲಿರುವ ಈ ಶಾಸನಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಂಕಿತ ಹಾಕಬೇಕಿದೆ.

ಕೋವಿಡ್‌–19ನಿಂದ ಈಗಾಗಲೇ ದೇಶ ತತ್ತರಿಸಿದ್ದು, ಬರುವ ದಿನಗಳಲ್ಲಿ ಆರ್ಥಿಕತೆ ಮತ್ತಷ್ಟು ಕುಸಿಯುವ ಆತಂಕವೂ ಇತ್ತು. ಹೀಗಾಗಿ ಜನರಿಗೆ ನೆರವಿನ ಹಸ್ತ ಚಾಚಿ, ಆ ಮೂಲಕ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಈ ಪ್ಯಾಕೇಜ್‌ಗೆ ರಿಪ‍ಬ್ಲಿಕನ್‌ ಹಾಗೂ ಡೆಮಾಕ್ರಟಿಕ್‌ ಸಂಸದರು ಹಲವು ಸುತ್ತಿನ ಚರ್ಚೆ ನಂತರ ಅನುಮೋದನೆ ನೀಡಿದ್ದಾರೆ.

ADVERTISEMENT

‘ಅಮೆರಿಕದ ಜನತೆಗೆ ಶೀಘ್ರವೇ ಭಾರಿ ನೆರವು ಸಿಗಲಿದೆ’ ಎಂದು ರಿಪಬ್ಲಿಕನ್‌ ಸಂಸದ ಮಿಚ್‌ ಮ್ಯಾಕ್‌ಕಾನೆಲ್‌ ಟ್ವೀಟ್‌ ಮಾಡಿದ್ದಾರೆ.

‘ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ಹೇಳಿದ ಹಾಗೆ, ಜನರಿಗೆ ನೆರವು ನೀಡುವ ಸಲುವಾಗಿ ಇಟ್ಟ ಮೊದಲ ಹೆಜ್ಜೆ ಇದು. ಕೊರೊನಾ ವೈರಸ್‌ನಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಮತ್ತಷ್ಟು ನೆರವು ನೀಡುವ ಅಗತ್ಯ ಇದೆ’ ಎಂದು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.