ADVERTISEMENT

ಪಾಕ್‌ನಲ್ಲಿ ಎಫ್‌–16 ಯುದ್ಧ ವಿಮಾನ ಎಣಿಸಿದ ಅಮೆರಿಕ; ಒಂದೂ ನಾಪತ್ತೆಯಾಗಿಲ್ಲವಂತೆ

ಫಾರಿನ್‌ ಪಾಲಿಸಿ ಮ್ಯಾಗಜೀನ್‌ ವರದಿ

ಏಜೆನ್ಸೀಸ್
Published 5 ಏಪ್ರಿಲ್ 2019, 18:30 IST
Last Updated 5 ಏಪ್ರಿಲ್ 2019, 18:30 IST
   

ವಾಷಿಂಗ್ಟನ್‌: ಭಾರತದ ವಾಯುವಲಯ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಿ ಹೊಡೆದುರುಳಿಸಿದ್ದಾಗಿ ಭಾರತ ವಾಯುಪಡೆ ಈ ಹಿಂದೆ ಹೇಳಿತ್ತು. ಆದರೆ, ಪಾಕಿಸ್ತಾನದಲ್ಲಿರುವ ಎಫ್‌–16 ಯುದ್ಧ ವಿಮಾನಗಳ ಎಣಿಕೆ ಮಾಡಿರುವ ಅಮೆರಿಕ ’ಯಾವುದೇ ಯುದ್ಧ ವಿಮಾನ ನಾಪತ್ತೆಯಾಗಿಲ್ಲ, ಎಲ್ಲ ವಿಮಾನಗಳು ಎಣಿಕೆಗೆ ಸಿಕ್ಕಿವೆ’ ಎಂದು ಹೇಳಿರುವುದಾಗಿಅಮೆರಿಕದ ಪ್ರಮುಖ ನಿಯತಕಾಲಿಕೆಯೊಂದು ವರದಿ ಮಾಡಿದೆ.

ಫೆಬ್ರುವರಿ 27ರಂದು ಭಾರತ ಮತ್ತು ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳ ನಡುವೆ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನದ ಎಫ್‌–16 ಹೊಡೆದುರುಳಿಸಿರುವುದಾಗಿ ಭಾರತ ಹೇಳಿದೆ. ವರದಿ ಪ್ರಕಾರ, ಅಮೆರಿಕ ನಡೆಸಿರುವ ಎಫ್‌–16 ಯುದ್ಧ ವಿಮಾನಗಳ ಎಣಿಕೆಯ ಈ ಮಾಹಿತಿಭಾರತದ ಹೇಳಿಕೆಗೆ ವಿರುದ್ಧವಾಗಿದೆ.

ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನ ಪ್ರಯೋಗಿಸಿದ್ದ ‘ಎಎಂಆರ್‌ಎಎಎಂ ಕ್ಷಿಪಣಿ’ಯ ಭಾಗಗಳನ್ನು ಭಾರತದ ವಾಯುಪಡೆ ಫೆಬ್ರುವರಿ 28ರಂದು ಬಹಿರಂಗಪಡಿಸಿತ್ತು. ಕಾಶ್ಮೀರದಲ್ಲಿ ಭಾರತ ಸೇನಾ ವಲಯಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಾಯುಪಡೆ ಅಮೆರಿಕ ನಿರ್ಮಿತ ಎಫ್‌–16 ಯುದ್ಧ ವಿಮಾನಗಳನ್ನು ನಿಯೋಜಿಸಿತ್ತು ಎಂಬುದಕ್ಕೆ ಕ್ಷಿಪಣಿಗಳನ್ನು ಭಾರತ ಸಾಕ್ಷ್ಯವಾಗಿ ನೀಡಿತ್ತು.

ADVERTISEMENT

ಎಫ್‌–16 ಯುದ್ಧ ವಿಮಾನಗಳನ್ನು ಬಳಕೆ ಮಾಡಿಲ್ಲ ಹಾಗೂ ಭಾರತೀಯ ವಾಯುಪಡೆ ಯಾವುದೇ ವಿಮಾನಗಳನ್ನು ಹೊಡೆದುರುಳಿಸಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

ಫಾರಿನ್‌ ಪಾಲಿಸಿಮ್ಯಾಗಜೀನ್‌ ಪ್ರಕಾರ, ಅಮೆರಿಕದಿಂದ ಎಫ್‌–16 ಯುದ್ಧ ವಿಮಾನಗಳ ಒಪ್ಪಂದ ಮಾಡಿಕೊಂಡಿರುವ ಪಾಕಿಸ್ತಾನವು ತನ್ನಲ್ಲಿರುವ ಯುದ್ಧ ವಿಮಾನಗಳ ಎಣಿಕೆ ನಡೆಸಲು ಅಮೆರಿಕಗೆ ಆಹ್ವಾನ ನೀಡಿತ್ತು.

‘ಫೆಬ್ರುವರಿಯಲ್ಲಿ ಭಾರತ–ಪಾಕಿಸ್ತಾನ ವಾಯುಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನದ ಎಫ್‌–16 ಹೊಡೆದುರುಳಿಸಿರುವುದಾಗಿ ಭಾರತ ಪುರಾವೆಗಳ ಸಹಿತ ಪ್ರತಿಪಾದಿಸಿದೆ. ಆದರೆ, ಪಾಕಿಸ್ತಾನದಲ್ಲಿ ಅಮೆರಿಕ ನಡೆಸಿರುವ ಎಫ್‌–16 ಯುದ್ಧ ವಿಮಾನಗಳ ಎಣಿಕೆಯಲ್ಲಿ ಯಾವುದೇ ವಿಮಾನ ನಾಪತ್ತೆಯಾಗಿರುವುದು ದಾಖಲಾಗಿಲ್ಲ, ಎಲ್ಲವೂ ಸರಿಯಾಗಿರುವುದು ಕಂಡು ಬಂದಿದೆ’ ಎಂದು ಮ್ಯಾಗಜೀನ್‌ನ ಲಾರಾ ಸೆಲಿಗ್ಮ್ಯಾನ್‌ ವರದಿ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಎಫ್‌–16 ಯುದ್ಧ ವಿಮಾನಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಎಲ್ಲ ವಿಮಾನಗಳು ಅಲ್ಲಿದ್ದವು ಹಾಗೂ ದಾಖಲು ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ರಕ್ಷಣಾ ಇಲಾಖೆ ಎಫ್‌–16 ಎಣಿಕೆ ಸಂಬಂಧ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

‘ವಿವರ ಹೊರಬಂದ ನಂತರದಲ್ಲಿ ಭಾರತೀಯರ ಪಾಲಿಗೆ ಬಹುಕೆಟ್ಟದೆನಿಸಿದೆ’ ಎಂದು ಎಂಐಟಿ ಪ್ರೊಫೆಸರ್‌ ವಿಪಿಲ್‌ ನಾರಂಗ್‌ ಫಾರಿನ್‌ ಪಾಲಿಸಿ ಮ್ಯಾಗಜೀನ್‌ಗೆ ಪ್ರತಿಕ್ರಿಯಿಸಿದ್ದಾರೆ. ‘ಪಾಕಿಸ್ತಾನ ತಕ್ಕ ಬೆಲೆ ತರುವಂತೆ ಮಾಡುವಲ್ಲಿ ಭಾರತ ವಿಫಲಗೊಂಡಂತೆ ತೋರುತ್ತಿದೆ, ಈ ಪ್ರಕ್ರಿಯೆಯಲ್ಲಿ ತನ್ನದೇ ವಿಮಾನ ಮತ್ತು ಹೆಲಿಕಾಪ್ಟರ್‌ ಕಳೆದುಕೊಂಡಿದೆ’ ಎಂದಿದ್ದಾರೆ.

ಸೇನಾ ಸಹಕಾರದಂತಹ ಒಪ್ಪಂದಗಳಲ್ಲಿ ಅಮೆರಿಕ ಪೂರೈಸಿರುವ ಶಸ್ತ್ರಾಸ್ತ್ರಗಳು, ವಿಮಾನಗಳನ್ನು ನಿಯಮಿತವಾಗಿ ಪರಿಶೀಲನೆಗೆ ಒಳಪಡಿಸಿ, ಎಣಿಕೆ ದಾಖಲೆ ಪಡೆಯುತ್ತದೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಗೆ 40 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಹುತ್ಮಾತ್ಮರಾದರು. ಆ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಆತಂಕದ ವಾತಾವರಣ ಸೃಷ್ಟಿಯಾಯಿತು. ಪಾಕಿಸ್ತಾನದ ಬಾಲಾಕೋಟ್‌ ಶಿಬಿರಗಳ ಮೇಲೆ ಭಾರತ ಕಾರ್ಯಾಚರಣೆ ನಡೆಸಿತ್ತು. ಮರುದಿನವೇ ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳು ಭಾರತದ ವಾಯುವಲಯ ಪ್ರವೇಶಿಸಿ ಮರುದಾಳಿ ನಡೆಸುವ ಪ್ರಯತ್ನ ಮಾಡಿದವು. ಈ ಘರ್ಷಣೆಯಲ್ಲಿ ಭಾರತದ ಮಿಗ್‌ 21 ಯುದ್ಧವಿಮಾನ ಪತನಗೊಂಡು ಪೈಲಟ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿತ್ತು. ಮಾರ್ಚ್‌ 1ರಂದು ಅಭಿನಂದನ್‌ರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು.

ಹೊಡೆದುರುಳಿಸಿದ್ದು ನಿಜ: ಭಾರತ
ಪಾಕಿಸ್ತಾನ ವಾಯು ಪಡೆಯ ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ’ ಎಂದು ಭಾರತೀಯ ವಾಯುಪಡೆ ಸ್ಪಷ್ಟಪಡಿಸಿದೆ.‘ನೌಶೆರಾ ವಲಯದಲ್ಲಿ ಎಫ್‌–16 ಅನ್ನು ಮಿಗ್‌ 21 ಬೈಸನ್‌ನಿಂದ ಹೊಡೆದು ಹಾಕಲಾಗಿದೆ’ ಎಂದು ವಾಯುಪಡೆ ಪ್ರಕಟಣೆ ತಿಳಿಸಿದೆ.

ಭಾರತ ಸತ್ಯ ‌ನುಡಿಯಲಿ: ಪಾಕ್‌
ಇಸ್ಲಾಮಾಬಾದ್‌
: ಎಫ್‌–16 ಯುದ್ಧ ವಿಮಾನ ಹೊಡೆದುರುಳಿಸಿರುವ ಕುರಿತು ಈಗಲಾದರೂ ಭಾರತ ಸತ್ಯ ನುಡಿಯಲಿ ಎಂದು ಪಾಕಿಸ್ತಾನಿ ಸೇನೆ ಹೇಳಿದೆ.

‘ಸುಳ್ಳು ಹೇಳಿಕೆಗಳ ಬಗ್ಗೆ ಭಾರತ ಸ್ಪಷ್ಟನೆ ನೀಡಬೇಕಾಗಿದೆ. ವಾಸ್ತವ ಹಾನಿಯ ಬಗ್ಗೆ ವಿವರ ನೀಡಲಿ. ಸತ್ಯಕ್ಕೆ ಸಾವಿಲ್ಲ’ ಎಂದು ಮೇಜರ್‌ ಜನರಲ್‌ ಅಸೀಫ್‌ ಘಪೂರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.