ADVERTISEMENT

ಹಲವು ಕ್ಷೇತ್ರಗಳಲ್ಲಿ ಅಮೆರಿಕಕ್ಕೆ ಕಾಡುತ್ತಿದೆ ಬಿಕ್ಕಟ್ಟು: ಕಮಲಾ ಹ್ಯಾರಿಸ್ ಟೀಕೆ

ಪಿಟಿಐ
Published 17 ಅಕ್ಟೋಬರ್ 2020, 7:52 IST
Last Updated 17 ಅಕ್ಟೋಬರ್ 2020, 7:52 IST
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್   

ಮೇಕನ್ (ಜಾರ್ಜಿಯಾ): ಸಾರ್ವಜನಿಕ ಆರೋಗ್ಯ, ಆರ್ಥಿಕತೆ, ಆಹಾರ ಸೇರಿದಂತೆ ವಿವಿಧ ರಂಗಗಳಲ್ಲಿ ಅಮೆರಿಕ ಇಂದು ಪ್ರಮುಖ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ದೂರಿದ್ದಾರೆ.

ಇವುಗಳ ಜೊತೆಗೆ ಈಗ ಹವಾಮಾನ ಬದಲಾವಣೆ, ವರ್ಣಭೇದ ಸಮಸ್ಯೆಗಳು ಬಾಧಿಸುತ್ತಿವೆ. ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ಅವರು ಆರೋಪಿಸಿದರು.

ವಿಸ್ಕಾನ್‌ಸಿನ್‌ನಲ್ಲಿ ಶುಕ್ರವಾರ ನಡೆದ ವರ್ಚುವಲ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ದೇಶವನ್ನು ಬಾಧಿಸುವ ಮೊದಲೇ, ಅಧ್ಯಕ್ಷ ಟ್ರಂಪ್ ಅವರಿಗೆ ಅದರ ಪರಿಣಾಮದ ಗಂಭೀರತೆಯ ಅರಿವು ಇತ್ತು ಎಂದು ಹೇಳಿದರು.

ADVERTISEMENT

ಅಧ್ಯಕ್ಷ ಟ್ರಂಪ್‌ ಅವರಿಗೆ ಸೋಂಕಿನ ಪರಿಣಾಮ ತಿಳಿದಿತ್ತು. ಜ್ವರಕ್ಕಿಂತಲೂ ಐದು ಪಟ್ಟು ಹೆಚ್ಚು ಅಪಾಯಕಾರಿ ಎಂಬುದು ಜನವರಿ 28ರಂದೇ ಅವರಿಗೆ ಗೊತ್ತಾಗಿತ್ತು. ಕೋವಿಡ್‌ ನಿರ್ವಹಣೆಯಲ್ಲಿನ ವೈಫಲ್ಯ ಟ್ರಂಪ್‌ ಆಡಳಿತದ ಒಟ್ಟಾರೆ ಆಡಳಿತ ವೈಫಲ್ಯದ ಉತ್ತುಂಗವಾಗಿದೆ ಎಂದು ಅವರು ತರಾಟೆಗೆ ತೆಗದುಕೊಂಡರು.

ಇದೇ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡನ್‌ ಅವರ ಆಡಳಿತ ಸಾಮರ್ಥ್ಯ ಮತ್ತು ಅನುಭವವನ್ನು ಕಮಲಾ ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.