ADVERTISEMENT

ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದ ಅಮೆರಿಕ

ಪಿಟಿಐ
Published 5 ಡಿಸೆಂಬರ್ 2021, 12:44 IST
Last Updated 5 ಡಿಸೆಂಬರ್ 2021, 12:44 IST
ಕೋವಿಡ್‌
ಕೋವಿಡ್‌   

ವಾಷಿಂಗ್ಟನ್‌ (ಪಿಟಿಐ): ಹೊಸ ಓಮೈಕ್ರಾನ್‌ ರೂಪಾಂತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕವು, ಭಾರತ ಸೇರಿದಂತೆ ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೆ ಕೋವಿಡ್‌ 19ರ ನೆಗೆಟಿವ್‌ ವರದಿ ಅಥವಾ ಸಾಂಕ್ರಾಮಿಕದಿಂದ ಚೇತರಿಸಿಕೊಂಡ ಪುರಾವೆ ತರುವುದನ್ನು ಕಡ್ಡಾಯಗೊಳಿಸಿದೆ.

ಕೋವಿಡ್‌ನ ಹೊಸ ನಿಯಮಗಳು ಇದೇ 6ರಿಂದ ಜಾರಿಗೆ ಬರಲಿವೆ ಎಂದು ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ಈ ನಿಯಮಗಳು ಅಮೆರಿಕಕ್ಕೆ ತೆರಳುವ 2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕೋವಿಡ್‌ ನೆಗೆಟಿವ್‌ ವರದಿಯು ಪ್ರಯಾಣಕ್ಕೆ ಹೊರಡುವ ಒಂದು ದಿನ ಮುನ್ನ ತೆಗೆದುಕೊಂಡಿರಬೇಕು ಎಂದು ನಿಯಮ ತಿಳಿಸುತ್ತದೆ.

ADVERTISEMENT

ನ್ಯೂಯಾರ್ಕ್‌ನಲ್ಲಿ ಓಮೈಕ್ರಾನ್‌ ರೂಪಾಂತರದ ಮೂರು ಹೊಸ ಪ್ರಕರಣಗಳು ಶನಿವಾರ ಪತ್ತೆಯಾಗಿವೆ. ಇದರಿಂದ ನ್ಯೂಯಾರ್ಕ್‌ ರಾಜ್ಯದಲ್ಲಿ ಓಮೈಕ್ರಾನ್‌ ರೂಪಾಂತರ ದೃಢಪಟ್ಟ ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿದಂತಾಗಿದೆ. ನ್ಯೂಯಾರ್ಕ್ ನಗರ ಒಂದರಲ್ಲಿಯೇ ಏಳು ಪ್ರಕರಣಗಳು ದೃಢಪಟ್ಟವೆ. ಇದರ ಬೆನ್ನಲ್ಲೇ ಅಮೆರಿಕ ಹೊಸ ಪ್ರಯಾಣ ನಿಯಮಗಳನ್ನು ಪ್ರಕಟಿಸಿದೆ.

ಬ್ರಿಟನ್‌ ಪ್ರವೇಶಕ್ಕೂ ನೆಗೆಟಿವ್‌ ವರದಿ ಅಗತ್ಯ (ಲಂಡನ್‌ ವರದಿ): ಬ್ರಿಟನ್‌ ತನ್ನ ದೇಶ ಪ್ರವೇಶಿಸುವ ಎಲ್ಲ ಪ್ರಯಾಣಿಕರಿಗೆ ನಿರ್ಗಮನ ಪೂರ್ವ ಕೋವಿಡ್‌–19ರ ನೆಗೆಟಿವ್‌ ವರದಿ ತರುವ ನಿಯಮವನ್ನು ಮರು- ಪರಿಚಯಿಸಿದೆ.

ಹೊಸ ಓಮೈಕ್ರಾನ್ ರೂಪಾಂತರದ ಹರಡುವಿಕೆಯ ಭೀತಿಯಿಂದಾಗಿ ಅದು ನೈಜೀರಿಯಾವನ್ನು ಕೆಂಪು ಪಟ್ಟಿಗೆ ಸೇರಿಸುವ ಮೂಲಕ, ಅಲ್ಲಿನ ಪ್ರಯಾಣಿಕರಿಗೆ ಪ್ರಯಾಣ ನಿಷೇಧ ಹೇರಿದೆ.

ಬ್ರಿಟನ್‌ಗೆ ಪ್ರಯಾಣ ಬೆಳೆಸುವವರು ಪ್ರಯಾಣಕ್ಕೂ 48 ಗಂಟೆಗಳ ಮುಂಚೆ ಮಾಡಿಸಿಕೊಂಡ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಸಲ್ಲಿಸಬೇಕು. ಈ ನಿಯಮ ಲಸಿಕೆ ಪಡೆದಿರುವವರಿಗೆ ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.