ADVERTISEMENT

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: ಅಮೆರಿಕದಿಂದ MRH -60 ಹೆಲಿಕಾಪ್ಟರ್‌ ಹಸ್ತಾಂತರ

ಪಿಟಿಐ
Published 17 ಜುಲೈ 2021, 2:43 IST
Last Updated 17 ಜುಲೈ 2021, 2:43 IST
ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಟ್ವಿಟರ್ ಚಿತ್ರದ ಸ್ಕ್ರೀನ್ ಗ್ರ್ಯಾಬ್
ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಟ್ವಿಟರ್ ಚಿತ್ರದ ಸ್ಕ್ರೀನ್ ಗ್ರ್ಯಾಬ್   

ವಾಷಿಂಗ್ಟನ್: ಭಾರತ-ಅಮೆರಿಕ ರಕ್ಷಣಾ ಸಂಬಂಧ ಬಲಪಡಿಸುವ ಮತ್ತೊಂದು ಉದಾಹರಣೆಯಾಗಿ, ಅಮೆರಿಕ ನೌಕಾಪಡೆಯು ಎರಡು ಎಮ್‌ಆರ್‌ಎಚ್ -60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.

ಲಾಕ್ಹೀಡ್ ಮಾರ್ಟಿನ್ ಕಂಪನಿ ತಯಾರಿಸುವ ಈ ಮಾದರಿಯ 24 ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಯು ಅಮೆರಿಕ ಸರ್ಕಾರದಿಂದ ವಿದೇಶಿ ಮಿಲಿಟರಿ ಉಪಕರಣದ ಮಾರಾಟದ ಅಡಿಯಲ್ಲಿ 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಖರೀದಿಸುತ್ತಿದೆ.

ಅಮೆರಿಕದ ನೌಕಾಪಡೆಯಿಂದ ಭಾರತೀಯ ನೌಕಾಪಡೆಗೆ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಸ್ಯಾನ್ ಡಿಯಾಗೋದ ನಾರ್ತ್ ಐಲ್ಯಾಂಡ್ ನೌಕಾ ವಾಯು ನಿಲ್ದಾಣ ಅಥವಾ ಎನ್ಎಎಸ್ ನಾರ್ತ್ ಐಲ್ಯಾಂಡ್‌ನಲ್ಲಿ ನಡೆಯಿತು. ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ADVERTISEMENT

ಆಲ್-ವೆದರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳ ಪ್ರವೇಶವು ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಸಂಧು ಹೇಳಿದರು.

‘ಭಾರತ ಮತ್ತು ಅಮೆರಿಕದ ಸ್ನೇಹ ಆಗಸವನ್ನು ಮುಟ್ಟಿದೆ’ಎಂದು ಅವರು ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 20 ಬಿಲಿಯನ್ ಡಾಲರ್‌ಗಳಿಗೆ ವಿಸ್ತರಿಸಿದೆ ಎಂದು ಅವರು ತಿಳಿಸಿದ್ದಾರೆ.

ಎಂಹೆಚ್-60ಆರ್ ಹೆಲಿಕಾಪ್ಟರ್ ಎಲ್ಲಾ ಹವಾಮಾನದಲ್ಲಿ ಬಳಸಬಹುದಾದ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಅನೇಕ ಕಾರ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.

ಈ ಎಂಆರ್‌ಹೆಚ್‌ನ ಸೇರ್ಪಡೆಯು ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಹಲವಾರು ವಿಶಿಷ್ಟ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧಪಡಿಸಲಾಗಿದೆ.

ಈ ಹೆಲಿಕಾಪ್ಟರ್‌ಗಳ ಚಾಲನೆಗೆಸಂಬಂಧಿಸಿದಂತೆ ಭಾರತೀಯ ನೌಕಾಪಡೆಯ ಸಿಬ್ಬಂದಿಯ ಮೊದಲ ಬ್ಯಾಚ್ ಪ್ರಸ್ತುತ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.