ADVERTISEMENT

ಏಷ್ಯನ್‌–ಅಮೆರಿಕನ್ನರ ವಿರುದ್ಧ ಅಪರಾಧ ತಡೆ ಮಸೂದೆಗೆ ಬೈಡನ್‌ ಅಂಕಿತ

ಪಿಟಿಐ
Published 21 ಮೇ 2021, 6:37 IST
Last Updated 21 ಮೇ 2021, 6:37 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್‌–19 ಪಿಡುಗು ವ್ಯಾಪಕಗೊಂಡ ನಂತರ ಏಷ್ಯನ್‌–ಅಮೆರಿಕನ್ನರ ಮೇಲೆ ಹಲ್ಲೆ, ಹತ್ಯೆಯಂತಹ ಕೃತ್ಯಗಳು ಹೆಚ್ಚಿದವು. ಇಂಥ ಅಪರಾಧಗಳನ್ನು ತಡೆಯುವ ಸಲುವಾಗಿ ರೂಪಿಸಿರುವ ಮಸೂದೆಗೆ ಅಧ್ಯಕ್ಷ ಜೋ ಬೈಡನ್‌ ಅವರು ಸಹಿ ಹಾಕಿದ್ದಾರೆ.

‘ಏಷ್ಯನ್‌–ಅಮೆರಿಕನ್ನರ ವಿರುದ್ಧ ನಡೆಯುವ ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ನಿಖರ ಕ್ರಮ ಸಾಧ್ಯವಾಗಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಬೈಡನ್‌ ಹೇಳಿದರು.

‘ಅಪರಾಧ ಕೃತ್ಯಗಳು ಸಂಭವಿಸಿದಾಗ ತ್ವರಿತವಾಗಿ ಮಾಹಿತಿ ನೀಡಲು ಅನುಕೂಲವಾಗುವಂತೆ ಹಾಟ್‌ಲೈನ್‌ಗಳನ್ನು ಸ್ಥಾಪಿಸಬೇಕು. ಇಂಗ್ಲಿಷ್‌ ಅನ್ನು ಸರಿಯಾಗಿ ಮಾತನಾಡಲು ಬಾರದವರಿಗೆ ಈ ವಿಷಯದಲ್ಲಿ ನೆರವು ನೀಡಬೇಕು. ಇಂಥ ಹಲವಾರು ಕ್ರಮಗಳನ್ನು ಕೈಗೊಳ್ಳಲು ಈ ಮಸೂದೆ ಸಂಪನ್ಮೂಲ ಒದಗಿಸಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಅಪರಾಧ ಕೃತ್ಯಗಳ ತನಿಖೆ, ದುಷ್ಕರ್ಮಿಗಳ ಪತ್ತೆ ಹಾಗೂ ಈ ಕುರಿತು ವರದಿ ಮಾಡುವ ಬಗ್ಗೆ ರಾಜ್ಯ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ಈ ಮಸೂದೆ ಅವಕಾಶ ಕಲ್ಪಿಸುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.