ADVERTISEMENT

ಮಿತ್ರರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ: ಜೊ ಬೈಡನ್‌ ಭರವಸೆ

ಪಿಟಿಐ
Published 21 ಆಗಸ್ಟ್ 2020, 11:03 IST
Last Updated 21 ಆಗಸ್ಟ್ 2020, 11:03 IST
ಜೊ ಬೈಡನ್‌
ಜೊ ಬೈಡನ್‌   

ವಾಷಿಂಗ್ಟನ್‌: ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದು ಬಂದರೆ, ಅಮೆರಿಕದ ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟೂ ಗಟ್ಟಿಗೊಳಿಸುವೆ. ಯಾವುದೇ ಕಾರಣಕ್ಕೂ ಸರ್ವಾಧಿಕಾರಿಗಳೊಂದಿಗೆ ಸ್ನೇಹ ಇಲ್ಲ ಎಂದು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೊ ಬೈಡನ್‌ ಭರವಸೆ ನೀಡಿದ್ದಾರೆ.

ಆನ್‌ಲೈನ್‌ ಮೂಲಕ ನಡೆದ ಡೆಮಾಕ್ರಟಿಕ್‌ ಪಕ್ಷದ ನಾಲ್ಕು ದಿನಗಳ ರಾಷ್ಟ್ರೀಯ ಸಮಾವೇಶದ ಕೊನೆಯ ದಿನ ಮಾತನಾಡಿದ ಅವರು, ತಮ್ಮ ವಿದೇಶಾಂಗ ನೀತಿ ಏನಿರಲಿದೆ ಎಂಬ ಬಗ್ಗೆ ವಿವರಿಸಿದರು.

‘ಕೋವಿಡ್‌–19 ಪಿಡುಗಿನಿಂದ ಅಮೆರಿಕ ತತ್ತರಿಸಿದೆ. ಆದರೆ, ಇಂಥ ಸಂದರ್ಭದಲ್ಲಿ ಚೀನಾದ ಒತ್ತಡಕ್ಕೆ ಮಣಿದು ಅಮೆರಿಕ ಜನತೆಯ ಹಿತಾಸಕ್ತಿ ಕಡೆಗಣಿಸುವ ಮಾತೇ ಇಲ್ಲ’ ಎಂದೂ ಅವರು ಭರವಸೆ ನೀಡಿದರು.

ADVERTISEMENT

‘ಪ್ರಜಾತಾಂತ್ರಿಕ ತಳಹದಿಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ವಿದೇಶಿ ಶಕ್ತಿಗಳು ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ. ಮಾನವ ಹಕ್ಕುಗಳು, ಘನತೆಯಂತಹ ಅಮೆರಿಕ ಪಾಲಿಸಿಕೊಂಡು ಬಂದಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವೆ’ ಎಂದೂ ಹೇಳಿದರು.

‘ಅಮೆರಿಕದ ಯೋಧರ ತಲೆಗೆ ಬಹುಮಾನ ಘೋಷಿಸಿರುವ ರಷ್ಯಾದ ನಡೆಯನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ದೇಶದ ಭದ್ರತೆ, ಶಾಂತಿ ಕಾಪಾಡುವುದು ಹಾಗೂ ಅಭಿವೃದ್ಧಿಯನ್ನೂ ಕಡೆಗಣಿಸುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.