ವಾಷಿಂಗ್ಟನ್: ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಅಮಾನತುಗೊಳಿಸಿದ್ದ ಅಮೆರಿಕ ಅದನ್ನು ಪುನರಾರಂಭಿಸುವುದಾಗಿ ತಿಳಿಸಿದೆ. ಆದರೆ, ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ‘ಅನ್‌ಲಾಕ್’ ಮಾಡಬೇಕು ಎಂದು ಅದು ಹೇಳಿದೆ.
ವೀಸಾಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರ ಸಾಮಾಜಿಕ ಮಾಧ್ಯಮ ಖಾತೆಗಳು ಪರಿಶೀಲನೆಗೆ ಒಳಗಾಗಲಿವೆ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿವರಿಸಿದೆ.
‘ಅರ್ಜಿದಾರರ ಖಾತೆಗಳನ್ನು ಸಚಿವಾಲಯದ ಅಧಿಕಾರಿಗಳು ಪರಿಶೀಲಿಸುತ್ತಾರೆ. ಅಮೆರಿಕದ ಮೂಲ ತತ್ವಗಳು, ಸರ್ಕಾರ, ಸಂಸ್ಕೃತಿ, ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರ ಸಂದೇಶಗಳ ಬಗ್ಗೆ ನಿಗಾವಹಿಸುತ್ತಾರೆ’ ಎಂದು ಅದು ಮಾಹಿತಿ ನೀಡಿದೆ.
ವೀಸಾಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಆ ಮೂಲಕ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಅಂಥವರ ವೀಸಾ ಅರ್ಜಿ ತಿರಸ್ಕೃತವಾಗುತ್ತದೆ ಎಂದು ಸಚಿವಾಲಯ ಬುಧವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿದಾರರು ಖಾತೆಗಳನ್ನು ಬಹಿರಂಗಪಡಿಸಲು ನಿರಾಕರಿಸಿದರೆ, ಅವರು ತಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಅರ್ಥೈಸಬೇಕಾಗುತ್ತದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.