ADVERTISEMENT

ಬಲೂನ್‌ ಅವಶೇಷಗಳನ್ನು ಚೀನಾಕ್ಕೆ ಹಿಂದಿರುಗಿಸುವುದಿಲ್ಲ: ಅಮೆರಿಕ

ಪಿಟಿಐ
Published 7 ಫೆಬ್ರುವರಿ 2023, 12:33 IST
Last Updated 7 ಫೆಬ್ರುವರಿ 2023, 12:33 IST
ಜಾನ್‌ ಕಿರ್ಬಿ
ಜಾನ್‌ ಕಿರ್ಬಿ   

ವಾಷಿಂಗ್ಟನ್: ಅಟ್ಲಾಂಟಿಕ್‌ ಸಾಗರ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ತಾನು ಹೊಡೆದುರುಳಿಸಿರುವ ಕಣ್ಗಾವಲು ಬಲೂನ್‌ನ ಅವಶೇಷಗಳನ್ನು ಚೀನಾಕ್ಕೆ ಮರಳಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

‘ಬಲೂನ್‌ನ ಅವಶೇಷಗಳನ್ನು ಹಿಂದಿರುಗಿಸುವ ಉದ್ದೇಶ ಅಥವಾ ಯೋಜನೆ ಬಗ್ಗೆ ನನಗೆ ತಿಳಿದಿಲ್ಲ’ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ.

‘ಸಾಗರ ತೀರದಲ್ಲಿ ಬಲೂನ್‌ನ ಕೆಲ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಮುದ್ರದಲ್ಲಿ ಮುಳುಗಿರಬಹುದಾದಂತಹ ಉಳಿದ ಭಾಗಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಮುಂದುವರಿದಿದೆ’ ಎಂದೂ ಕಿರ್ಬಿ ಹೇಳಿದ್ದಾರೆ.

ADVERTISEMENT

ಬಲೂನ್‌ ಕುರಿತು ಪ್ರಾಥಮಿಕ ಮಾಹಿತಿಯನ್ನು ಶ್ವೇತಭವನ ಸಂಗ್ರಹಿಸಿದ್ದು, ಹೊಡೆದುರುಳಿಸಲಾಗಿರುವ ಬಲೂನ್‌ ಕಣ್ಗಾವಲು ನಡೆಸಲು ಹಾರಿಬಿಡಲಾಗಿತ್ತು ಎಂದು ಸೋಮವಾರ ಖಚಿತಪಡಿಸಿದೆ. ಅಲ್ಲದೇ, ಚೀನಾದ ಈ ನಡೆಯು ಅಂತರರಾಷ್ಟ್ರೀಯ ಕಾನೂನು ಹಾಗೂ ಅಮೆರಿಕದ ಸಾರ್ವಭೌಮತೆಯ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬಲೂನ್‌ಅನ್ನು ಹೊಡೆದುರುಳಿಸುವುದಕ್ಕೂ ಮುನ್ನ ಸಂಗ್ರಹಿಸಿರುವ ಮಾಹಿತಿಯ ವಿಶ್ಲೇಷಣೆ ನಡೆಸಲಾಗುತ್ತಿದೆ. ಈಗ, ಬಲೂನ್‌ನ ಅವಶೇಷಗಳನ್ನು ಸಂಗ್ರಹಿಸುವ ಕಾರ್ಯ ಪೂರ್ಣಗೊಂಡ ನಂತರ ಮತ್ತಷ್ಟು ವಿವರಗಳು ಲಭ್ಯವಾಗುವ ವಿಶ್ವಾಸ ಇದೆ’ ಎಂದು ಕಿರ್ಬಿ ಹೇಳಿದ್ದಾರೆ.

‘ವೇಗವನ್ನು ಹೆಚ್ಚಿಸಿಕೊಳ್ಳುವುದು, ತಗ್ಗಿಸುವುದು ಹಾಗೂ ತಿರುಗುವುದು ಸೇರಿದಂತೆ ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನು ಬಲೂನ್‌ ಹೊಂದಿತ್ತು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಚೀನಾದ ಈ ಬೇಜವಾಬ್ದಾರಿ ನಡೆ ಅಮೆರಿಕಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಗೊತ್ತಾಗಿದೆ ಎಂಬುದು ನಮ್ಮ ನಂಬಿಕೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರಿನ್ ಜೀನ್‌ ಪೆರಿ ಹೇಳಿದ್ದಾರೆ.

ನಮ್ಮ ಹಿತಾಸಕ್ತಿ–ಹಕ್ಕುಗಳ ರಕ್ಷಣೆಗೆ ಬದ್ಧ: ಚೀನಾ

ಬೀಜಿಂಗ್: ಕಣ್ಗಾವಲು ಶಂಕೆಯಿಂದ ಅಮೆರಿಕ ತನ್ನ ಬಲೂನ್‌ಅನ್ನು ಹೊಡೆದುರುಳಿಸಿರುವ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಚೀನಾ, ತನ್ನ ನ್ಯಾಯಬದ್ಧ ಹಕ್ಕುಗಳು ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಬದ್ಧ ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್‌, ‘ಮಾನವ ರಹಿತ ಈ ಗಗನನೌಕೆಯಿಂದ ಅಮೆರಿಕಕ್ಕೆ ಯಾವುದೇ ಅಪಾಯ ಇರಲಿಲ್ಲ. ಅಲ್ಲದೇ, ಆಕಸ್ಮಿಕವಾಗಿ ಅಮೆರಿಕ ವಾಯುಪ್ರದೇಶವನ್ನು ಅದು ಪ್ರವೇಶಿಸಿತ್ತು’ ಎಂಬ ಮಾತುಗಳನ್ನು ಪುನರುಚ್ಚರಿಸಿದ್ದಾರೆ.

‘ಶಾಂತಚಿತ್ತದಿಂದ ಹಾಗೂ ವೃತ್ತಿಪರತೆಯಿಂದ ಪರಿಸ್ಥಿತಿಯನ್ನು ನಿರ್ವಹಿಸುವುದನ್ನು ಬಿಟ್ಟು ಅಮೆರಿಕ ಈ ವಿಷಯದಲ್ಲಿ ಅತಿರೇಕದ ಪ್ರತಿಕ್ರಿಯೆ ವ್ಯಕ್ತಪಡಿಸಿದೆ’ ಎಂದೂ ಅವರು ಟೀಕಿಸಿದ್ದಾರೆ.

ಹವಾಮಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಹಾರಿಬಿಟ್ಟಿದ ಬಲೂನ್‌ ಇದಾಗಿತ್ತು ಎಂದಷ್ಟೆ ಹೇಳಿರುವ ಚೀನಾ, ಅದು ಯಾವ ಇಲಾಖೆ ಅಥವಾ ಯಾವ ಕಂಪನಿಗೆ ಸೇರಿದ್ದು ಎಂಬ ಮಾಹಿತಿ ನೀಡಲು ನಿರಾಕರಿಸಿದೆ.

ಈ ಮಧ್ಯೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಅವರು ಈ ವಾರ ಚೀನಾಕ್ಕೆ ನೀಡಬೇಕಿದ್ದ ಭೇಟಿಯನ್ನು ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.