ADVERTISEMENT

ಅಮೆರಿಕದ ಫೆಡರಲ್ ನ್ಯಾಯಾಧೀಶರಾಗಿ ಮುಸ್ಲಿಂ-ಅಮೆರಿಕನ್‌: ಸೆನೆಟ್ ಅನುಮೋದನೆ

ನ್ಯೂಜೆರ್ಸಿಯ ಜಿಲ್ಲಾ ನ್ಯಾಯಾಧೀಶರಾಗಿ ಪಾಕಿಸ್ತಾನಿ– ಅಮೆರಿಕನ್ ಝಹೀದ್‌ ಖುರೇಷಿ ಆಯ್ಕೆ

ಪಿಟಿಐ
Published 11 ಜೂನ್ 2021, 6:25 IST
Last Updated 11 ಜೂನ್ 2021, 6:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ನ್ಯೂಜೆರ್ಸಿಯ ಜಿಲ್ಲಾ ನ್ಯಾಯಾಲಯದ ಫೆಡರಲ್‌ ನ್ಯಾಯಾಧೀಶರನ್ನಾಗಿ ಪಾಕಿಸ್ತಾನಿ – ಅಮೆರಿಕನ್‌ ಝಹೀದ್‌ ಖುರೇಷಿ ಅವರನ್ನು ನಾಮನಿರ್ದೇಶನಗೊಳಿಸುವ ಐತಿಹಾಸಿಕ ನಿರ್ಣಯವೊಂದಕ್ಕೆ ಅಮೆರಿಕದ ಸೆನೆಟ್‌ ಅನುಮೋದನೆ ನೀಡಿದೆ.

ಈ ಮೂಲಕ ಅಮೆರಿಕದ ಇತಿಹಾಸದಲ್ಲಿ ಜಿಲ್ಲಾ ನ್ಯಾಯಾಲಯವೊಂದಕ್ಕೆ ಮುಸ್ಲಿಂ ಸಮುದಾಯದವರೊಬ್ಬರು ನ್ಯಾಯಾಧೀಶರಾಗಿ ನೇಮಕಗೊಂಡಂತಾಗಿದೆ.

ಗುರುವಾರ ಅಮೆರಿಕದ ಸೆನಟ್‌ನಲ್ಲಿ ನಡೆದ ಚುನಾವಣೆಯಲ್ಲಿ 81–16 ಮತಗಳೊಂದಿಗೆ 46 ವರ್ಷದ ಝಹೀದ್ ಖುರೇಷಿಯವರನ್ನು ನ್ಯಾಯಾಧೀಶರಾಗಿ ನಾಮನಿರ್ದೇಶನ ಮಾಡುವುದಕ್ಕೆ ಅನುಮೋದನೆ ದೊರೆಯಿತು.

ADVERTISEMENT

ರಿಪಬ್ಲಿಕನ್ – ಡೆಮಾಕ್ರಟಿಕ್ ಪಕ್ಷದ 34 ಸೆನೆಟರ್‌ಗಳು ಮುಸ್ಲಿಂ–ಅಮೆರಿಕನ್ ವ್ಯಕ್ತಿಯನ್ನು ಫೆಡರಲ್ ನ್ಯಾಯಾಧೀಶರಾಗಿ ನೇಮಕ ಮಾಡಲು ಅನುಮೋದನೆ ನೀಡಿದರು.

ಪ್ರಸ್ತುತ, ನ್ಯೂಜೆರ್ಸಿಯ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿರುವ ಖುರೇಷಿ ಅವರು, ಅಮೆರಿಕದ ಡಿಸ್ಟ್ರಿಕ್ಟ್ ಕೋರ್ಟ್ ಆಫ್ ನ್ಯೂಜೆರ್ಸಿಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ.

ನ್ಯಾಯಾಧೀಶ ಖುರೇಷಿ ಅವರು ತಮ್ಮ ವೃತ್ತಿ ಜೀವನವನ್ನು ದೇಶದ ಸೇವೆಗೆ ಮೀಸಲಿಟ್ಟಿದ್ದಾರೆ. ಖುರೇಷಿ ಅವರು ನ್ಯಾಯಾಧೀಶರಾಗಿ ನೇಮಕಗೊಂಡಿರುವ ಕಥೆ, ಶ್ರೀಮಂತ ವೈವಿಧ್ಯವಿರುವ ನ್ಯೂಜೆರ್ಸಿ ಮತ್ತು ಅಮೆರಿಕದಲ್ಲಿ ಏನೂ ಬೇಕಾದರೂ ಸಾಧ್ಯವಾಗಬಹುದು‘ ಎಂಬುದನ್ನು ಸಾಕಾರಗೊಳಿಸುತ್ತದೆ ಎಂದು ಮತಚಲಾವಣೆಗೆ ಮುನ್ನ ಸದನದಲ್ಲಿ ಸೆನೆಟರ್ ರಾಬರ್ಟ್ ಮೆನೆಂಡೆಜ್ ತಮ್ಮ ಭಾಷಣದಲ್ಲಿ ಹೇಳಿದರು. ಮೆನೆಂಡೆಜ್ ಅವರು ಸೆನೆಟ್‌ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.