ನ್ಯೂಯಾರ್ಕ್/ವಾಷಿಂಗ್ಟನ್: 26/11ರ ಮುಂಬೈ ಭಯೋತ್ಪಾದಕ ದಾಳಿ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ದಾಳಿಕೋರರನ್ನು ಕಾನೂನಿನ ಅಡಿಗೆ ತರಲು ಭಾರತದ ಪ್ರಯತ್ನಗಳನ್ನು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸಿದೆ ಎಂದು ತಹವ್ವುರ್ ಹುಸೇನ್ ರಾಣಾ ಅವರನ್ನು ಹಸ್ತಾಂತರಿಸಿದ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿದೆ.
ಮುಂಬೈ ದಾಳಿಯ ಆರೋಪಿ ರಾಣಾನನ್ನು ದಾಳಿ ಪಿತೂರಿ ಕುರಿತಂತೆ ವಿಚಾರಣೆಗೆ ಒಳಪಡಿಸಲು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರಾದ ಟ್ಯಾಮಿ ಬ್ರೂಸ್ ಹೇಳಿದ್ದಾರೆ.
‘ಮುಂಬೈ ದಾಳಿಯ ಸಂಚುಕೋರರನ್ನು ನ್ಯಾಯದ ಕಟಕಟೆಗೆ ತರುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಪ್ರಯತ್ನಗಳನ್ನು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸಿದೆ. ಅಧ್ಯಕ್ಷ ಟ್ರಂಪ್ ಹೇಳಿದಂತೆ, ಭಯೋತ್ಪಾದನೆಯ ಜಾಗತಿಕ ಪಿಡುಗನ್ನು ಎದುರಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ’ ಎಂದು ಅವರು ಹೇಳಿದ್ದಾರೆ.
ರಾಣಾ ಈಗ ಭಾರತದ ವಶದಲ್ಲಿದ್ದಾರೆ. ಉಗ್ರನ ಹಸ್ತಾಂತರದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.
6 ಮಂದಿ ಅಮೆರಿಕನ್ನರು ಸೇರಿದಂತೆ 166 ಜನರ ಜೀವ ತೆಗೆದ ಮುಂಬೈ ದಾಳಿ ಇಡೀ ಜಗತ್ತನ್ನು ಬೆಚ್ಚಿಬೀಳಿಸಿತ್ತು ಎಂದು ಬ್ರೂಸ್ ಹೇಳಿದ್ದಾರೆ.
ಇದಕ್ಕೂ ಮೊದಲು, ಅಮೆರಿಕದ ನ್ಯಾಯಾಂಗ ಇಲಾಖೆಯ ವಕ್ತಾರರು ಪಿಟಿಐಗೆ ನೀಡಿದ ಹೇಳಿಕೆಯಲ್ಲಿ, ಘೋರ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸುವತ್ತ ಇದು ನಿರ್ಣಾಯಕ ಹೆಜ್ಜೆ ಎಂದು ಹೇಳಿದ್ದಾರೆ.
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾತ್ರದ ಕುರಿತಂತೆ 10 ಕ್ರಿಮಿನಲ್ ಆರೋಪಗಳಲ್ಲಿ ವಿಚಾರಣೆಗೆ ಒಳಗಾಗಲು ರಾಣಾನನ್ನು ಹಸ್ತಾಂತರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಹಲವು ವರ್ಷಗಳ ನಿರಂತರ ಪ್ರಯತ್ನಗಳ ನಂತರ ರಾಣಾನನ್ನು ಅಮೆರಿಕದಿಂದ ಗಡೀಪಾರು ಮಾಡಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಹಸ್ತಾಂತರ ತಡೆಗೆ ರಾಣಾ ಸಲ್ಲಿಸಿದ್ದ ಮನವಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ವಜಾ ಮಾಡಿದ ನಂತರ ಇದು ಸಾಧ್ಯವಾಗಿದೆ.
ಗುರುವಾರ ಸಂಜೆ ಲಾಸ್ ಏಂಜಲೀಸ್‌ನಿಂದ ವಿಶೇಷ ವಿಮಾನದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳು ರಾಣಾನನ್ನು ದೆಹಲಿಗೆ ಕರೆತಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.