ವಾಷಿಂಗ್ಟನ್: ದೇಶದಲ್ಲಿನ ವಲಸಿಗರಿಗೆ ನೀಡಲಾಗಿರುವ ತಾತ್ಕಾಲಿಕ ‘ಪೆರೋಲ್’ ರದ್ದುಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ವೆನೆಜುವೆಲಾ, ಕ್ಯೂಬಾ, ಹೈಟಿ, ನಿಕಾರಾಗುವದಿಂದ ವಲಸೆ ಬಂದು ಅಮೆರಿಕದಲ್ಲಿ ನೆಲಸಿರುವ ಸಾವಿರಾರು ಜನರ ತಾತ್ಕಾಲಿಕ ‘ಪೆರೋಲ್’ ರದ್ದಾಗಲಿದೆ. ಅಲ್ಲದೇ, ಸುಪ್ರೀಂ ಕೋರ್ಟ್‌ನ ಈ ತೀರ್ಪು, ದೇಶದಿಂದ ವಲಸಿಗರನ್ನು ಗಡೀಪಾರು ಮಾಡಬೇಕೆಂಬ ಟ್ರಂಪ್ ಅವರ ನಿರ್ಧಾರಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಜೋ ಬೈಡನ್ ನೇತೃತ್ವದ ಸರ್ಕಾರವು 5,32,000 ವಲಸಿಗರಿಗೆ ನೀಡಿದ್ದ ಪೆರೋಲ್ ನೀಡಿತ್ತು. ಈ ಪೆರೋಲ್ ರದ್ದು ಮಾಡಿ, ಹಾಲಿ ಅಧ್ಯಕ್ಷ ಟ್ರಂಪ್ ಜನವರಿ 20ರಂದು ಕಾರ್ಯಾದೇಶ ಹೊರಡಿಸಿದ್ದರು.
ಆದರೆ, ಬಾಸ್ಟನ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ತಲ್ವಾನಿ ಅವರು ಟ್ರಂಪ್ ಆದೇಶ ರದ್ದುಮಾಡಿ ಆದೇಶಿಸಿದ್ದರು. ಈಗ, ಸುಪ್ರೀಂ ಕೋರ್ಟ್, ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ.
ಮಾನವೀಯತೆ ಇಲ್ಲವೇ ಸಾರ್ವಜನಿಕ ಹಿತದೃಷ್ಟಿ ಆಧಾರದಲ್ಲಿ, ವಲಸಿಗರಿಗೆ ಪೆರೋಲ್ ನೀಡಲು ಕಾನೂನಿನಲ್ಲಿ ಅವಕಾಶ ಇದೆ. ಈ ರೀತಿ ಪೆರೋಲ್ ಪಡೆದವರು ಅಮೆರಿಕದಲ್ಲಿ ವಾಸಿಸಬಹುದು ಹಾಗೂ ಉದ್ಯೋಗವನ್ನೂ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.