ADVERTISEMENT

ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಟ್ರಂಪ್‌ ಬೆದರಿಕೆ: ರಷ್ಯಾ ಖಂಡನೆ

ಏಜೆನ್ಸೀಸ್
Published 5 ಆಗಸ್ಟ್ 2025, 18:18 IST
Last Updated 5 ಆಗಸ್ಟ್ 2025, 18:18 IST
ಶ್ರೀನಿವಾಸ್‌ ಕೂಚಿಭೊಟ್ಲ ಹತ್ಯೆಗೆ ಟ್ರಂಪ್‌ ಖಂಡನೆ
ಶ್ರೀನಿವಾಸ್‌ ಕೂಚಿಭೊಟ್ಲ ಹತ್ಯೆಗೆ ಟ್ರಂಪ್‌ ಖಂಡನೆ   

ಮಾಸ್ಕೊ: ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕೆ ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸುವ ಅಮೆರಿಕದ ಬೆದರಿಕೆಯನ್ನು ಕ್ರೆಮ್ಲಿನ್ ಮಂಗಳವಾರ ಟೀಕಿಸಿದೆ.

ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ಭಾರತದ ಮೇಲಿನ ಸುಂಕ ಹೆಚ್ಚಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಎಚ್ಚರಿಸಿದ್ದರು. ಅಮೆರಿಕದ ಈ ನಿಲುವು ‘ನ್ಯಾಯಸಮ್ಮತವಲ್ಲದ್ದು’ ಎನ್ನುವ ಮೂಲಕ ಭಾರತ ತಿರುಗೇಟು ನೀಡಿತ್ತು.

ರಷ್ಯಾ ಕೂಡಾ ಅದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ ಭಾರತದ ಬೆಂಬಲಕ್ಕೆ ನಿಂತಿದೆ. ‘ಸಾರ್ವಭೌಮ ರಾಷ್ಟ್ರಗಳು ತಮ್ಮದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿವೆ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ವರದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಕಡಿತಗೊಳಿಸುವಂತೆ ಒತ್ತಾಯಿಸುವುದು ‘ನ್ಯಾಯಸಮ್ಮತವಲ್ಲ’ ಎಂದು ಅಮೆರಿಕದ ಹೆಸರು ಹೇಳದೆಯೇ ಅವರು ಟೀಕಿಸಿದ್ದಾರೆ.

2022ರ ಫೆಬ್ರುವರಿಯಲ್ಲಿ ಉಕ್ರೇನ್‌ ಜತೆಗಿನ ಯುದ್ಧ ಆರಂಭವಾದಾಗಿನಿಂದ ಯೂರೋಪಿನ ದೇಶಗಳು ರಷ್ಯಾದ ರಫ್ತು ಗಳಿಕೆಗೆ ತಡೆಯೊಡ್ಡಲು ಪ್ರಯತ್ನಿಸುತ್ತಿವೆ. ಆದರೆ, ಭಾರತ ಮತ್ತು ಚೀನಾ ಸೇರಿದಂತೆ ಯೂರೋಪಿನ ಹೊರಗಿನ ದೇಶಗಳಿಗೆ ತೈಲ ರಫ್ತು ಮಾಡುವ ಮೂಲಕ ರಷ್ಯಾ, ಬಹುಕೋಟಿ ಡಾಲರ್‌ ಹಣದ ಹರಿವು ಮುಂದುವರಿಯುವುದನ್ನು ಖಚಿತಪಡಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.