ADVERTISEMENT

ಅಮೆರಿಕ ಉಪಾಧ್ಯಕ್ಷರ ಪತ್ನಿ ಉಷಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆಯೇ?

ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಸ್ಪಷ್ಟನೆ

ಪಿಟಿಐ
Published 1 ನವೆಂಬರ್ 2025, 13:59 IST
Last Updated 1 ನವೆಂಬರ್ 2025, 13:59 IST
<div class="paragraphs"><p>ಜೆ.ಡಿ. ವ್ಯಾನ್ಸ್‌ ಹಾಗೂ ಪತ್ನಿ ಉಷಾ ವ್ಯಾನ್ಸ್</p></div>

ಜೆ.ಡಿ. ವ್ಯಾನ್ಸ್‌ ಹಾಗೂ ಪತ್ನಿ ಉಷಾ ವ್ಯಾನ್ಸ್

   

ನ್ಯೂಯಾರ್ಕ್‌: ‘ನನ್ನ ಪತ್ನಿ ಉಷಾ ವ್ಯಾನ್ಸ್‌ ಕ್ರೈಸ್ತ ಧರ್ಮದವರು ಅಲ್ಲ. ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ಯಾವುದೇ ಯೋಚನೆ ಇಲ್ಲ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಹೇಳಿದ್ದಾರೆ. 

ಮಿಸಿಸಿಪಿಯಲ್ಲಿ ಇತ್ತೀಚೆಗೆ ನಡೆದ ‘ಟರ್ನಿಂಗ್‌ ಪಾಯಿಂಟ್‌ ಯುಎಸ್‌ಎ’ ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಡಿ.ವ್ಯಾನ್ಸ್‌, ‘ಭಾರತೀಯ, ಹಿಂದೂ ಕುಟುಂಬದ ಹಿನ್ನೆಲೆಯ ಉಷಾ ತಮ್ಮೊಂದಿಗೆ ಚರ್ಚ್‌ಗೆ ಬರುತ್ತಾರೆ. ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂಬುದು ತಮ್ಮ ಬಯಕೆ’ ಎಂದು ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ADVERTISEMENT

ಶನಿವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಹೆಚ್ಚಿನ ಪ್ರತಿಕ್ರಿಯೆಗಳು ಕ್ರೈಸ್ತ ವಿರೋಧಿ ಮತಾಂಧತೆಯಿಂದ ಕೂಡಿವೆ. ಉಷಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ಯೋಚನೆ ಇಲ್ಲ. ಆದರೆ, ನಾನು ಚರ್ಚ್‌ನಿಂದ ಪ್ರಭಾವಿತನಾದಂತೆ ನನ್ನ ಪತ್ನಿಯೂ ಪ್ರಭಾವಿತಗೊಳ್ಳಬಲ್ಲರು. ನಾನು ಕ್ರೈಸ್ತ ಧರ್ಮದಲ್ಲಿ ವಿಶ್ವಾಸ ಹೊಂದಿದ್ದೇನೆ, ನನ್ನ ಪತ್ನಿಯೂ ಅದನ್ನು ಹಾಗೆಯೇ ನೋಡುವ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.  

ತಮ್ಮ ಅಂತರ್‌ಧರ್ಮೀಯ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ನಾನೊಬ್ಬ ರಾಜಕಾರಣಿ ಆಗಿರುವುದರಿಂದ ಜನರಿಗೆ ಕುತೂಹಲ ಇದೆ. ಹಾಗಾಗಿ ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ನುಣುಚಿಕೊಳ್ಳುವುದಿಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ರಂಪ್‌ ಆಡಳಿತವು ವಲಸೆ ನೀತಿಗಳಲ್ಲಿ ಬದಲಾವಣೆ ತಂದ ಬೆನ್ನಲ್ಲೇ, ಉಷಾ ವ್ಯಾನ್ಸ್‌ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. 

ವ್ಯಾನ್ಸ್‌ಗೆ ಸಲಹೆ: ‘ಹಿಂದೂ ಧರ್ಮದೊಂದಿಗೆ ತೊಡಗಿಸಿಕೊಳ್ಳಿ’ ಎಂದು ಹಿಂದೂ ಅಮೆರಿಕನ್‌ ಫೌಂಡೇಷನ್‌ (ಎಚ್‌ಎಎಪ್‌) ಜೆ.ಡಿ.ವ್ಯಾನ್ಸ್‌ಗೆ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.